ಬಳ್ಳಾರಿ: ರಾಮ ಮಂದಿರ ನಿರ್ಮಾಣಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಕುಟುಂಬದವರು ದೇಣಿಗೆ ಸಂಗ್ರಹ ಕಾರ್ಯವನ್ನು ಮಾಡುತ್ತಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಸರ್ವರೂ ಸಮರ್ಪಣಾ ಭಾವದಿಂದ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಎಂದು ಆನಂದ್ ಸಿಂಗ್ ಮನವಿ ಮಾಡಿದ್ದಾರೆ. ಇಂದು ಬೆಳಗ್ಗಿನಿಂದಲೇ ಸಚಿವರು ಸೇರಿದಂತೆ ಅವರ ಸಂಪೂರ್ಣ ಕುಟುಂಬ ಸದಸ್ಯರು ಈ ಜಾಥಾದಲ್ಲಿ ಪಾಲ್ಗೊಂಡು ನಿಧಿ ಸಂಗ್ರಹಣೆ ಮಾಡಿದ್ದಾರೆ.
ಅಭಿಯಾನದಲ್ಲಿ ಸಚಿವರ ಪುತ್ರ ಸಿದ್ಧಾರ್ಥ್ ಸಿಂಗ್, ಮಗಳು ವೈಷವಿ ಸಿಂಗ್ ಹಾಗೂ ಯಶಸ್ವಿನಿ ಸಿಂಗ್ ಕೂಡ ಭಾಗಿಯಾಗಿ ದೇಣಿಗೆ ಸಂಗ್ರಹವನ್ನು ಮಾಡಿದ್ದಾರೆ. ನಗರದ ವಿವಿಧ ಕಡೆ ತೆರಳಿ ಸ್ವತಃ ನಿಧಿ ಸಂಗ್ರಹಿಸಿದ ಸಚಿವರು, ದೇಣಿಗೆ ನೀಡಿದವರಿಗೆ ರಶೀದಿ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ನಗರದೆಲ್ಲೆಡೆ ದೇಣಿಗೆ ಸಂಗ್ರಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐತಿಹಾಸಿಕ ರಾಮ ಮಂದಿರ ನಿರ್ಮಾಣವಾಗುತ್ತಿರುವುದರ ಹಿಂದೆ ನೂರಾರು ವರ್ಷಗಳ ಕನಸು, ಲಕ್ಷಾಂತರ ಜನರ ತ್ಯಾಗ, ಬಲಿದಾನವಿದೆ. ಇದಕ್ಕಾಗಿ ಸರ್ವರೂ ತಮ್ಮ ಕೈಲಾದಷ್ಟು ದೇಣಿಗೆ ನೀಡುವ ಮೂಲಕ ಅವರ ಶ್ರಮಕ್ಕೆ ಗೌರವ ವಂದನೆ ಸಲ್ಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಈ ಐತಿಹಾಸಿಕ ಕ್ಷಣದಲ್ಲಿ ದೇಶದ ಪ್ರತಿಯೊಬ್ಬರೂ ಭಾಗವಹಿಸಬೇಕೆಂಬ ಆಶಾಭಾವನೆ ನಮ್ಮದು. ನಿಧಿ ಸಂಗ್ರಹ ಅಭಿಯಾನ ಸ್ವಾಭಿಮಾನದ ಸಂಕೇತವಾಗಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸುವ ಮೂಲಕ ಸಹಕಾರ ನೀಡಬೇಕಾಗಿದೆ. ಸರ್ವರ ಸಮರ್ಪಣಾ ಭಾವದಿಂದ ನೀಡಿದ ದೇಣಿಗೆಯಿಂದ ಭವ್ಯವಾದ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ.