ರಾಮ ಮಂದಿರದ ಹೋರಾಟದ ನೆನಪು ತೆರೆದಿಟ್ಟ ಉಡುಪಿಯ ಪಲಿಮಾರು ಸ್ವಾಮೀಜಿ

Public TV
3 Min Read
palimaru

-ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲೇ ಪೂಜೆ, ಸ್ನಾನ
-ಜಾಗಟೆ ಬಾರಿಸಿದ್ದ ಪೊಲೀಸ್ ಕಾನ್‍ಸ್ಟೇಬಲ್

ಉಡುಪಿ: ರಾಮಮಂದಿರಕ್ಕೆ ಶಿಲಾನ್ಯಾಸ ಆಗುತ್ತಿರುವುದು ನಮಗೆಲ್ಲ ಹೆಮ್ಮೆಯ, ಸ್ವಾಭಿಮಾನದ, ಪರಮ ಪಾವನವಾದ ದಿನ. ಈ ಕಾಲದಲ್ಲಿ ನಾವಿದ್ದೇವೆ ಎಂಬುವುದು ಹೆಮ್ಮೆಯ ವಿಚಾರ ಎಂದು ಉಡುಪಿ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ ನೆನಪು ತೆರೆದಿಟ್ಟರು.

ಈ ದಿನಕ್ಕಾಗಿ ನಾವೆಲ್ಲ ಹಲವು ವರ್ಷಗಳಿಂದ ಕಾಯುತ್ತಿದ್ದೇವೆ. ರಾಮ ಮಂದಿರಕ್ಕಾಗಿ ಬೇರೆ ಬೇರೆ ಕಡೆಗಳಲ್ಲಿ ಇಟ್ಟಿಗೆ ಪೂಜೆ, ರಾಮ ತಾರಕ ಮಂತ್ರ ಯಜ್ಞಗಳು ನಡೆದಿತ್ತು. ಅವುಗಳಲ್ಲಿ ಭಾಗವಹಿಸುವ ಅವಕಾಶ ನನಗೂ ಲಭಿಸಿದೆ. ಅಯೋಧ್ಯೆಯಲ್ಲೊಮ್ಮೆ ಕರಸೇವೆ ನಡೆಸುವ ಘೋಷಣೆಯಾದಾಗ ಗುರುಗಳು, ಪೇಜಾವರ ಶ್ರೀಗಳು, ಅದಮಾರು ಶ್ರೀಗಳ ಜೊತೆಗೆ ನಾವೆಲ್ಲ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಉತ್ತರ ಪ್ರದೇಶಕ್ಕೆ ಪ್ರವೇಶವಾದಾಗಲೇ ನಮ್ಮ ವಾಹನಗಳನ್ನು ಅಡ್ಡಗಟ್ಟಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಆ ಘಟನೆಯನ್ನು ಇನ್ನೂ ಮರೆಯಲು ಸಾಧ್ಯವಾಗುತ್ತಿಲ್ಲ ಎಂದರು.

Palimaru Paryaya swamiji

ನಾವೆಲ್ಲ ಯತಿಗಳು ಅಲ್ಲಿದ್ದೆವು. ಪೊಲೀಸರು ನಿಮ್ಮನ್ನು ಬಿಡಲು ಆಗುವುದಿಲ್ಲ ಎಂದಿದ್ದರು. ಅಲ್ಲಿದ್ದವರಲ್ಲಿ ಯಾರೋ ಒಬ್ಬರು ನಾವು ಪ್ರಯಾಗಕ್ಕೆ ಹೋಗುತ್ತಿದ್ದೇವೆ ಎಂದು ಸುಳ್ಳು ಹೇಳಿದರು. ಆಗ ಪೇಜಾವರ ಶ್ರೀಗಳು ವಿರೋಧ ಮಾಡಿ, ಇಲ್ಲ ನಾವು ಅಯೋಧ್ಯೆಗೇ ಹೋಗುವುದು, ಕರಸೇವೆಗೇ ಹೋಗುತ್ತಿದ್ದೇವೆ ಎಂದು ಹೇಳಿದರು. ಪೊಲೀಸರಿಗೆ ಸಾಕ್ಷಿ ಸಿಕ್ಕಿತು. ಹಾಗಾಗಿ ನಮ್ಮನ್ನು ಅಲ್ಲಿಯೇ ಕೂರಿಸಿದರು. ಅಲ್ಲೇ ಪಕ್ಕದಲ್ಲಿ ಬಾವಿ ಇತ್ತು, ಅಲ್ಲಿ ಸ್ನಾನ ಮಾಡಿ ಮಧ್ಯಾಹ್ನ 12 ಗಂಟೆಗೆ ದೇವರ ಪೂಜೆ ನಡೆಸಲಾಯಿತು. ಪೊಲೀಸರೇ ದೇವರ ಪೂಜೆ ನೋಡಿ, ಕಣ್ತುಂಬಿಕೊಂಡು ಘಂಟೆ ಭಾರಿಸಿದ್ದರು.

UDP PALIMARU SWAMIJI AVB 11

ಜನರು ಬರಬಾರದು ಎಲ್ಲರನ್ನು ತಡೆಯಬೇಕು ಎಂದು ಮುಲಾಯಂ ಸಿಂಗ್ ಹೇಳಿದ್ದು, ಆದರೆ ಅಲ್ಲಿಯೇ ರಾಮ ದೇವರು, ಪಟ್ಟದ ದೇವರಿಗೆ ರಾಮೋತ್ಸವ ನಡೆಯಿತು. ಅಲ್ಲಿ ಸ್ವಾಮೀಜಿಗಳು ಸೇರಿದ್ದಾರೆ ಎನ್ನುವ ಸಂದೇಶ ಸಿಗುತ್ತಲೇ ನಮ್ಮ ಸ್ಥಳವನ್ನು ಬದಲಿಸಲಾಯಿತು. ಅಲ್ಲಿಂದ ಒಂದು ಶಾಲೆಗೆ ಕರೆದುಕೊಂಡು ಹೋದರು. ಶಂಕರಘಡದ ಶಾಲೆಯೇ ನಮಗೆ ಜೈಲಾಗಿತ್ತು. ಶಾಲೆಯನ್ನು ಜೈಲಾಗಿ ನಾವು ನೋಡುವುದಿಲ್ಲ, ಅದನ್ನು ಖುಷಿಯಿಂದ ಸಂಭ್ರಮಿಸುವವರು ನಾವು. ಅದು ಕಾರ್ತಿಕ ಮಾಸ, ಸಂಜೆ ತುಳಸೀಪೂಜೆ, ಸಂಕೀರ್ತನೆಗಳನ್ನು ನೋಡುವುದಕ್ಕೆ ಸಾವಿರ ಸಾವಿರ ಮಂದಿ ಬರುತ್ತಿದ್ದರು. ಇದು ರೋಚಕ ಅನುಭವ. ಅಲ್ಲಿಂದ ಅಯೋಧ್ಯೆಗೆ ನಮಗೆ ಹೋಗಲು ಸಾಧ್ಯವಾಗಿಲ್ಲ. ಅಲ್ಲಿಂದಲೇ ವಾಪಸ್ ಬರಬೇಕಾಯಿತು. ಆದರೆ ಖುಷಿ ಇತ್ತು, ಕರಸೇವೆಯಲ್ಲಿ ಭಾಗವಹಿಸದೇ ಇದ್ದರೂ ರಾಮ ದೇವರಿಗಾಗಿ ನಾವು ಕೆಲವು ದಿನ ಹೀಗೆ ಎಲ್ಲವನ್ನು ಬಿಟ್ಟು ಗೃಹ ಬಂಧನಕ್ಕೆ ಒಳಗಾಗಿದ್ದೆವು.

ayodhya

ಕಲ್ಯಾಣಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಇನ್ನೊಮ್ಮೆ ಕರಸೇವೆ ಘೋಷಣೆಯಾಗಿತು. ಆಗಲೂ ಗುರುಗಳು, ಪೇಜಾವರ ಶ್ರೀಗಳ ನೇತ್ವದೊಂದಿಗೆ ಭಾಗವಹಿಸಿದ್ದೆವು. ಮರುದಿನ ಪೇಜಾವರ ಶ್ರೀಗಳು ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠೆ ಮಾಡಿದರು. ಆಗಲೂ ಸಾಕ್ಷಿಯಾಗಿದ್ದೆವು, ಪೂಜೆ ಮಾಡುವ ಯೋಗವನ್ನು ಮರೆಯಲಾಗುವುದಿಲ್ಲ. ದೇವರು ಎಲ್ಲರ ಪ್ರಾರ್ಥನೆಗೆ ಅನುಗ್ರಹಿಸಿದ್ದಾನೆ.

ಅಯೋಧ್ಯೆ ಎಂದರೆ ಯುದ್ಧವಿಲ್ಲದ್ದು ಎಂದರ್ಥ. ನಾವು ಇದನ್ನು ಅಸಂಭವ ಎಂದು ತಿಳಿದುಕೊಂಡಿದ್ದೆವು. ಅಸಾಧ್ಯದಾದದ್ದು ಸಾಧ್ಯವಾಗುತ್ತದೆ ಎಂದಾಗ ಮೈ ರೋಮಾಂಚನವಾಗುತ್ತದೆ. ಸರ್ವೋಚ್ಚ ನ್ಯಾಯಾಲಯ ಐಕ್ಯಮತದಿಂದ ಉತ್ತಮ ತೀರ್ಪು ನೀಡಿದೆ. ಇದೀಗ ರಾಮಮಂದಿರ ನಿರ್ಮಾಣದ ಸುಯೋಗ ಸನ್ನಿಹಿತವಾಗಿದೆ. ಅಲ್ಲಿ ಒಬ್ಬ ವ್ಯಕ್ತಿ ನಿಂತು ಭೂಮಿ ಪೂಜನ ನಡೆಸುತ್ತಿಲ್ಲ. ಅಲ್ಲಿ ರಾಮ ದೇವರು, ಆಂಜನೇಯ ದೇವರೇ ಕೂತು ಶಿಲಾನ್ಯಾಸ ಮಾಡುತ್ತಿದ್ದಾರೆ ಎಂದು ನಾವು ಅನುಸಂಧಾನ ಮಾಡಬೇಕು, ಪ್ರಧಾನಿಗಳ ಕೈಗೆ ನಾವೆಲ್ಲರೂ ಕೈ ಜೋಡಿಸಬೇಕು. ನಾವೆಲ್ಲರೂ ಅಲ್ಲಿ ಹೋಗಲು ಸಾಧ್ಯವಿಲ್ಲ ಎಂದು ಚಿಂತೆ ಬೇಡ, ಇಲ್ಲೇ ಕೂತು ನಾವು ಸಂಕಲ್ಪ ಮಾಡಿದರೆ, ಅಲ್ಲಿ ಹೋಗಿ ಅದು ಕಾರ್ಯಕಾರಿಯಾಗುತ್ತದೆ. ಸುಂದರವಾದ ಮಂದಿರ ನಿರ್ಮಾಣವಾಗುತ್ತದೆ ಎಂದು ಪಲಿಮಾರು ಸ್ವಾಮೀಜಿ ಶಿಲಾನ್ಯಾಸ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *