ರಾಯಚೂರು: ರಾಮಮಂದಿರ ನಿರ್ಮಾಣ ಸ್ಥಳ ವಿವಾದಿತ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಲಾದ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾತನಾಡಿದ ಅವರು, ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಹಣ ನೀಡುವುದಿಲ್ಲ ಎಂದಿರುವ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವವಿಲ್ಲದೆ ಮಾತನಾಡಿದ್ದಾರೆ. ಮಂದಿರ ನಿರ್ಮಾಣದ ಲೆಕ್ಕ ಕೇಳಲು ಸಿದ್ದರಾಮಯ್ಯ ಯಾರು? ಅವನು ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಬಹುದೇ ಅಂತ ಪ್ರಶ್ನಿಸಿದರು. ಕೂಲಿ ಮಾಡುವ ಜನ 10 ರೂಪಾಯಿ ನೀಡಿದ್ದಾರೆ, ಅವರು ಲೆಕ್ಕ ಕೇಳಲಿ ಇವನ್ಯಾರು ಲೆಕ್ಕ ಕೇಳಲು ಅಂತ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದರು.
Advertisement
Advertisement
ಹಣ ನೀಡದವರ ಮನೆ ಮನೆಗೆ ಮಾರ್ಕ್ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ, ರಾಯಚೂರಿನಲ್ಲೇ ಯಾರ ಮನೆಗೆ ಮಾರ್ಕ್ ಮಾಡಲಾಗಿದೆ ತೋರಿಸಲಿ. ರಾಮನ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿ ಬಿಡಬೇಕು ಎಂದರು.
Advertisement
ಗೋ ರಕ್ಷಕರನ್ನು ರಕ್ಷಣೆ ಮಾಡಿ ಅಂದ್ರೆ, ಯಾರು ಕೊಲೆ ಮಾಡಿದ್ರೂ ಅವರಿಗೆ ರಕ್ಷಣೆ ಮಾಡಿದರು. ಗೋ ಮಾತೆ ಶಾಪದಿಂದ ಸರ್ಕಾರ ಹೋಗಿತ್ತು. ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡರು, ಚಾಮುಂಡಿಯಲ್ಲಿ ಸೋತರು, ಇನ್ನೂ ಬುದ್ಧಿ ಬಂದಿಲ್ಲ. ಅವಾಗ ಗೋವಿನ ಬಗ್ಗೆ ಮಾತನಾಡಿ ರಾಜ್ಯ ಮತ್ತು ಕೇಂದ್ರದಲ್ಲಿ ಸರ್ಕಾರ ನೆಲಕಚ್ಚಿತ್ತು. ಈಗ ರಾಮನ ಬಗ್ಗೆ ಮಾತನಾಡುತ್ತಿದ್ದಾರೆ ನೆಲದ ಒಳಗೆ ಹೋಗುತ್ತೆ ಹೊರತು ಮೇಲೆ ಬರಲ್ಲ ಎಂದರು.
Advertisement
ಬಿಹಾರದಲ್ಲಿ ಬಿಜೆಪಿ ಸೋಲಿಸಲು ವಿಜಯೇಂದ್ರ ಹಣ ನೀಡಿದ್ದಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್‍ರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಹೇಗೆ ಉತ್ತರಿಸಲಿ, ಇಲ್ಲಿ ಯತ್ನಾಳರೂ ಇಲ್ಲ, ಹಣ ಕೊಟ್ಟಿರುವ ಆರೋಪ ಹೊತ್ತಿರುವ ವಿಜಯೇಂದ್ರರು ಇಲ್ಲ, ಎಲ್ಲಿಯ ಬಿಹಾರ ಈ ಸಂದರ್ಭದಲ್ಲಿ ನಾನೇನು ಹೇಳಲಾರೆ. ಯತ್ನಾಳರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ, ಉತ್ತರ ನೀಡುತ್ತಾರೆ. ಕೇಂದ್ರದ ನಾಯಕರು ಸೂಕ್ತ ತೀರ್ಮಾನಗೊಳ್ಳುತ್ತಾರೆ ಎಂದರು.
ಪಂಚಮಸಾಲಿಗೆ ಮೀಸಲಾತಿ ನೀಡಲು ಕ್ಯಾಬಿನೆಟ್ ನಲ್ಲಿ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಈ ಕುರಿತು ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ವರದಿ ನೀಡಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಪಿ ಎಂಜಿಎಸ್‍ವೈ ಯಲ್ಲಿ 5,600 ಕಿ.ಮೀ. ರಸ್ತೆ ನೀಡಿದೆ. ಈ ಮೂರು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಮನೆ ಮನೆಗೆ ಗಂಗೆ ಯೋಜನೆಯು ರಾಜ್ಯ ಸರ್ಕಾರದಿಂದ 4,000 ಕೋಟಿ ಮತ್ತು ಕೇಂದ್ರದ 4,000 ಕೋಟಿ ರೂ. ಅನುದಾನದಲ್ಲಿ ಆರಂಭವಾಗಿದೆ. ಜಲಧಾರೆ ಯೋಜನೆಯು ಮುಂದುವರಿದಿದೆ, 39 ಬಹುಗ್ರಾಮ ಯೋಜನೆಗೆ ಅನುಗುಣವಾಗಿ ಮೀಸಲಾತಿ ನೀಡಲು ನಿನ್ನೆ ಕ್ಯಾಬಿನೆಟ್ ನಲ್ಲಿ ತಿರ್ಮಾನಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಬೆಳಗ್ಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಕೆ.ಎಸ್.ಈಶ್ವರಪ್ಪ, ಗುರು ರಾಯರ ವೃಂದಾವನದ ದರ್ಶನ ಪಡೆದರು. ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ಈಶ್ವರಪ್ಪ ಹಾಗೂ ಸ್ಥಳೀಯ ಬಿಜೆಪಿ ಮುಖಂಡರಿಗೆ ಮಂತ್ರಾಕ್ಷತೆ ಆಶೀರ್ವಚನ ನೀಡಿದರು. ರಾಯಚೂರಿಗೆ ಬಂದಾಗಲೆಲ್ಲಾ ಮಂತ್ರಾಲಯಕ್ಕೆ ಭೇಟಿ ನೀಡುವ ಈಶ್ವರಪ್ಪ, ಈ ಬಾರಿಯೂ ರಾಯರ ದರ್ಶನ ಪಡೆದು ಬಳಿಕ ಇಲಾಖೆ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದರು.