– ರಾಮ ಬಂಟ ಹನುಮನ ಗಾಳಿಪಟ ಹಾರಾಟ
ಕೊಪ್ಪಳ: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿರುವ ಹಿನ್ನೆಲೆಯಲ್ಲಿ ರಾಮ ಬಂಟ ಹನುಮನ ಜನ್ಮಸ್ಥಳದಲ್ಲಿ ಹನುಮನಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರೆವೇರಿಸಲಾಯಿತು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮ ಜನ್ಮಸ್ಥಳ ಎಂದೇ ಪ್ರಖ್ಯಾತಿ ಪಡೆದ ಅಂಜನಾದ್ರಿ ಬೆಟ್ಟದಲ್ಲಿ ರಾಮ ಭಕ್ತರು ಮತ್ತು ಹಿಂದೂ ಪರ ಸಂಘಟನೆ ಮುಖಂಡರಿಂದ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಕೇಸರಿ ಧ್ವಜ ಹೂಗಳಿಂದ ಅಲಂಕರಿಸಿ ರಾಮಜಪ ಮಾಡುವ ಮೂಲಕ ರಾಮ ಮತ್ತು ಹನುಮನ ಆರಾಧನೆ ಮಾಡಲಾಯಿತು.

ಕೆಲದಿನಗಳ ಹಿಂದೆಯಷ್ಟೇ ಶ್ರೀರಾಮ ಸೇನೆಯಿಂದ ಹನುಮನ ಜನ್ಮಸ್ಥಳದಿಂದ ಮೃತಿಕೆ, ಶಿಲೆ, ಜಲವನ್ನು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕಳಿಸಿಕೊಡಲಾಗಿತ್ತು. ಅದರಂತೆ ಇಂದು ಶಿಲಾನ್ಯಾಸ ಪ್ರಯುಕ್ತವಾಗಿ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಕಾರ್ಯಕ್ರಮಕ್ಕೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಗಮಿಸಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ರಾಮಜಪದಲ್ಲಿ ಪಾಲ್ಗೊಂಡು ರಾಮನ ಆರಾಧನೆ ಮಾಡಿದರು.

ರಾಮಮಂದಿರ ನಿರ್ಮಾಣದ ಒಳಿತಿಗಾಗಿ ಹನುಮನ ಸ್ಥಳದಲ್ಲಿ ಪೂರ್ಣಾಹುತಿ ಹೋಮ ಹವನ ಕೂಡ ನಡೆಸಲಾಯ್ತು. ಮಂಗಳೂರಿನಿಂದ ಆಗಮಿಸಿದ ತಂಡ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ಗಾಳಿಪಟ ಹಾರಿಸಿ ಎಲ್ಲರನ್ನು ಗಮನಸೆಳೆಯುವಂತೆ ಮಾಡಿತು. ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಹಾರಿಸಿದ ಗಾಳಿಪಟದಲ್ಲಿ ಹನುಮನ ನಾಡಿನಿಂದ ರಾಮನ ಸೇವೆ ಎನ್ನುವ ಸಂದೇಶ ರವಾನಿಸಿದ ಮಂಗಳೂರಿನ ಟೀಂ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಸೂಲಿಬೆಲೆ ಮಾತನಾಡಿ, ರಾಮನಿಗಾಗಿ ಶಬರಿ ಕಾಯುವ ಹಾಗೇ ರಾಮಮಂದಿರ ನಿರ್ಮಾಣಕ್ಕಾಗಿ ಇಡೀ ದೇಶ ಕಾದು ಕುಳಿತಿತ್ತು. ಇಂದು ರಾಮಮಂದಿರ ನಿರ್ಮಾಣದ ಮಹತ್ವದ ದಿನ ಒದಗಿಬಂದಂತಾಗಿದೆ. ಇಡೀ ದೇಶವೇ ಸಂತೋಷ ಪಡುವಂತ ದಿನವಾಗಿದೆ. ಅದರಲ್ಲೂ ಕರ್ನಾಟಕದ ಜನತೆಯಂತು ಹೆಚ್ಚು ಖುಷಿ ಪಡುವ ದಿನ, ಯಾಕೆಂದರೆ ರಾಮಾಯಣ ಅಂತ್ಯವಾಗುವುದೇ ಕರ್ನಾಟಕದ ಭೂಮಿಯಿಂದ. ಇಲ್ಲಿನ ಹನುಮ ಸ್ಥಳಕ್ಕೆ ಬಂದ ರಾಮ ರಾಜ್ಯದ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದನ್ನು ನಾವು ಈಗ ಸ್ಮರಿಸಬಹುದು ಎಂದು ಹೇಳಿದರು.

