ಬೆಂಗಳೂರು: ರಾಮನಗರ-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಕೊರೊನಾ ಹರಡುವಿಕೆ ತಡೆಗಟ್ಟಲು ದಿನಬಳಕೆಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿ ಲಾಕ್ಡೌನ್ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ರಾಮನಗರ-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದ್ದು, ಸಮುದಾಯಕ್ಕೂ ಹರಡುತ್ತಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ದಿನಬಳಕೆ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿ. ಬೆಳಗ್ಗೆ 11 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಸಾರ್ವಜನಿಕ ಸಂಚಾರ ನಿರ್ಬಂಧಿಸಿ ಅಂಗಡಿ ಮುಂಗಟ್ಟಿ ಹಾಗೂ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ತಡೆಗಟ್ಟಲು ಸಂಪೂರ್ಣವಾಗಿ ಲಾಕ್‍ಡೌನ್ ಜಾರಿಗೊಳಿಸಬೇಕೆಂದು ಹೆಚ್.ಡಿ.ಕುಮಾರಸ್ವಾಮಿ ಅವರು ಪತ್ರದಲ್ಲಿ ಬರೆದಿದ್ದಾರೆ.
ರಾಮನಗರ-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಕೊರೊನಾ ಹರಡುವಿಕೆ ತಡೆಗಟ್ಟಲು ದಿನಬಳಕೆಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿ ಲಾಕ್ಡೌನ್ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. pic.twitter.com/D7j8VRToXf
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 24, 2020
ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ. ಈಗಿರುವ ಮೂರ್ನಾಲ್ಕು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್ ಗಳಿಲ್ಲ, ವೆಂಟಿಲೇಟರ್ ಗಳ ಕೊರತೆ ಇದೆ. ಇದಕ್ಕೆ ಸ್ವಯಂ ಪ್ರೇರಿತ ಲಾಕ್ ಡೌನ್ ಒಂದೇ ಪರಿಹಾರ. ಬೆಂಗಳೂರು ಸೇರಿದಂತೆ ರಾಜ್ಯದ ನಿವಾಸಿಗಳೇ, ನೀವು ಕೋವಿಡ್-19 ನಿಂದ ಪಾರಾಗಲು ಈಗ ಉಳಿದಿರುವುದು ಒಂದೇ ದಾರಿ. ಮನೆಯಲ್ಲೇ ಉಳಿದು ನೀವೇ ಸ್ವಯಂ ಘೋಷಿತ ಬಂದ್ ಆಚರಿಸಿ. ಪ್ರಾಣಕ್ಕಿಂತಲೂ ಹಣ ಮುಖ್ಯವಲ್ಲ. ಜೀವ ಇದ್ದರೆ ಹೇಗಾದರೂ ಬದುಕಬಹುದು. ನಿಮ್ಮ ಜೀವ ಜೀವನ ಈಗ ನಿಮ್ಮ ಕೈಯಲ್ಲಿದೆ ಎಂದು ಟ್ವೀಟ್ ಮಾಡಿದ್ದರು.