– ಸುಪ್ರೀಂನಿಂದ ಮಹತ್ವದ ತೀರ್ಪು
– 15 ದಿನದ ಒಳಗಡೆ ಸಮಿತಿಗೆ ದೇವಾಲಯ ಹಸ್ತಾಂತರ
ನವದೆಹಲಿ: ರಾಮಚಂದ್ರಾಪುರ ಮಠಕ್ಕೆ ಭಾರೀ ಹಿನ್ನಡೆಯಾಗಿದ್ದು, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣೆ ಹೊಣೆಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ಒಪ್ಪಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಸರ್ಕಾರ ರಾಮಚಂದ್ರಾಪುರ ಮಠಕ್ಕೆ ದೇವಾಲಯದ ನಿರ್ವಹಣೆಯ ಹೊಣೆ ನೀಡಿದ್ದ ಆದೇಶವನ್ನು ಹೈಕೋರ್ಟ್ 2018ರಲ್ಲಿ ರದ್ದು ಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾ. ಬೋಪಣ್ಣ, ನ್ಯಾ. ರಾಮಸುಬ್ರಹ್ಮಣಿಯನ್ ಅವರಿದ್ದ ಪೀಠ ಸೋಮವಾರ ತೀರ್ಪು ಪ್ರಕಟಿಸಿದೆ.
ನಿವೃತ್ತ ನ್ಯಾ. ಶ್ರೀಕೃಷ್ಣ ಅವರಿಗೆ ಸಮಿತಿಯ ನೇತೃತ್ವವನ್ನು ನೀಡಲಾಗಿದ್ದು, 15 ದಿನದೊಳಗೆ ದೇವಸ್ಥಾನ ಪಡೆಯಲು ಸಮಿತಿಗೆ ಸೂಚನೆ ನೀಡಿದೆ. ಸಮಿತಿಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕುಮಟ ಉಪ ವಿಭಾಗದ ಸಹಾಯಕ ಆಯುಕ್ತ, ಇಬ್ಬರು ಪ್ರತಿಷ್ಠಿತ ವ್ಯಕ್ತಿಗಳು, ಟ್ರಸ್ಟಿನ ಇಬ್ಬರು ಸದಸ್ಯರು ಇರಬೇಕೆಂದು ಹೇಳಿದೆ.
ಏನಿದು ಪ್ರಕರಣ?
2008ರ ಆಗಸ್ಟ್ ನಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಮಹಾಬಲೇಶ್ವರ ದೇವಾಲಯವನ್ನು ಹೊಸನಗರ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಇದನ್ನು ಪ್ರಶ್ನಿಸಿ ಬಾಲಚಂದ್ರ ವಿಘ್ನೇಶ್ವರ ದೀಕ್ಷಿತ್ ಹಾಗೂ ಇತರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರು ಗೋಕರ್ಣ ದೇವಾಲಯ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆ 1997ಕ್ಕೆ ಒಳಪಡುತ್ತದೆ, ಈ ದೇವಾಲಯವನ್ನು ಖಾಸಗಿಯವರಿಗೆ ಹಸ್ತಾಂತರ ಮಾಡಿರುವುದು ಸರಿಯಲ್ಲ ಎಂದು ವಾದ ಮುಂದೆ ಇಟ್ಟಿದ್ದರು. ಹೈಕೋರ್ಟ್ ಆದೇಶದ ಮೇರೆಗೆ ದೇವಾಲಯ ಸರಕಾರಕ್ಕೆ ಹಸ್ತಾಂತರವಾಗಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಮಠ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಪ್ರಕರಣ ಆಲಿಸಿದ ಸುಪ್ರೀಂಕೋರ್ಟ್ ಈ ಹಿಂದಿನಂತೆ ಯಥಾಸ್ಥಿತಿ ಕಾಯ್ಧುಕೊಳ್ಳಲು ಸೂಚಿಸಿತ್ತು.