ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಅವರ ಅಗಲಿಕೆ ನಂತರ ಚಿರುವಿನ ಹಳೆಯ ಫೋಟೋಗಳು, ಅವರು ಮಾಡಿದ್ದ ಕಮೆಂಟ್‍ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ‘ಬೃಂದಾವನ’ದಲ್ಲಿ ಚಿರು ಚಿರನಿದ್ರೆ
ನಟಿ ರಾಧಿಕಾ ಪಂಡಿತ್ ಫೋಟೋವೊಂದಕ್ಕೆ ಚಿರಂಜೀವಿ ಸರ್ಜಾ ಕಮೆಂಟ್ ಮಾಡಿದ್ದರು. ಇದೀಗ ಆ ಕಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಧಿಕಾ ಪಂಡಿತ್ ತಮ್ಮ ಮಗಳು ಐರಾ ಜೊತೆಗಿನ ಮುದ್ದಾದ ಫೋಟೊವೊಂದನ್ನು ಕಳೆದ ವರ್ಷ ಹಂಚಿಕೊಂಡಿದ್ದರು. ಆ ಫೋಟೋಗೆ, “ಈಕೆ ಹುಟ್ಟಿದ ದಿನ ನಾನೂ ಕೂಡ ಹುಟ್ಟಿದೆ. ಅಮ್ಮನಾಗಿ’ ಎಂಬ ಭಾವುಕ ಸಾಲುಗಳನ್ನು ಅವರು ಬರೆದಿದ್ದರು.
ರಾಧಿಕಾ ಅವರು ಪೋಸ್ಟ್ ಮಾಡಿದ ತಕ್ಷಣ ಚಿರಂಜೀವಿ ಸರ್ಜಾ ಆ ಫೋಟೋಗೆ ಕಮೆಂಟ್ ಮಾಡಿದ್ದರು. “ಅದು ಬಹಳ ನಿಜ. ಇದನ್ನು ಹೇಗೆ ವಿವರಿಸಬೇಕು ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಆದರೆ ಯಶ್ ಮತ್ತು ನಿಮ್ಮ ಬಗ್ಗೆ ನನಗೆ ತುಂಬಾ ಖುಷಿಯಾಗುತ್ತಿದೆ” ಎಂದು ಕಮೆಂಟ್ ಮಾಡಿದ್ದರು. ಚಿರು ಕಮೆಂಟ್ ಮಾಡಿದ ನಂತರ ರಾಧಿಕಾ, ‘ಥ್ಯಾಂಕ್ಯೂ ಚಿರು. ಮುಂದಿನ ಸರದಿ ನಿಮ್ಮಿಬ್ಬರದು’ ಎಂದು ರಿಪ್ಲೈ ಮಾಡಿದ್ದರು.
ರಾಧಿಕಾ ಪಂಡಿತ್ ಮಗುವಿನ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡುವ ಒಂದು ತಿಂಗಳ ಹಿಂದಷ್ಟೇ ಚಿರಂಜೀವಿ ಮತ್ತು ಮೇಘನಾ ರಾಜ್ ಮದುವೆಯಾಗಿತ್ತು. ಚಿರಂಜೀವಿ ಕೂಡ ತಮ್ಮ ಕುಟುಂಬಕ್ಕೆ ಹೊಸ ಸದಸ್ಯ ಬರುತ್ತಿದ್ದಾನೆ ಎಂದು ತುಂಬಾ ಸಂತಸಪಟ್ಟಿದ್ದರಂತೆ. ಈ ಬಗ್ಗೆ ಚಿರು ಆಪ್ತರ ಬಳಿ ಹೇಳಿಕೊಂಡಿದ್ದರಂತೆ. ಆದರೆ ಹೊಸ ಸದಸ್ಯ ಬರುವಷ್ಟರಲ್ಲಿ ಚಿರಂಜೀವಿ ಇಹಲೋಕ ತ್ಯಜಿಸಿ ಹೋಗಿದ್ದಾರೆ.
https://www.instagram.com/p/CBJP-Lcg43s/?utm_source=ig_embed
ರಾಧಿಕಾ ಪಂಡಿತ್, ಚಿರಂಜೀವಿ ಅಗಲಿಕೆಯ ದಿನ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುವ ಮೂಲಕ ಚಿರು ಸಾವಿಗೆ ಸಂತಪಾ ಸೂಚಿದ್ದರು. “ನನಗೆ ಚಿರಂಜೀವಿ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಒಳ್ಳೆಯ, ಸುಂದರ ಆತ್ಮ ನಮ್ಮನ್ನು ಬಿಟ್ಟು ಬೇಗನೇ ಹೋಗಿದೆ. ಹೀಗಾಗಿ ಪತ್ನಿ ಮೇಘನಾ, ಧ್ರುವ, ಅವರ ಅಮ್ಮ ಸೇರಿದಂತೆ ಇಡೀ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ನಾವು ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ” ಎಂದು ನೋವಿನಿಂದ ಬರೆದುಕೊಂಡಿದ್ದರು.