– ಬಿಯರ್ ಬಾಟಲ್, ಇಟ್ಟಿಗೆಯಿಂದು ಹೊಡೆದು ಕೊಂದ್ರು
ಚಂಡೀಗಢ: ರಾತ್ರಿ ವೇಳೆ ಪತ್ನಿ ಹಾಗೂ ತಂದೆಯ ಜೊತೆ ಮನೆಯ ಹೊರಗೆ ವಾಕ್ ಹೋದವ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಶವವಾದ ಘಟನೆ ಪಂಜಾಬ್‍ನ ಪಾಟಿಯಾಲ ಜಿಲ್ಲೆಯಲ್ಲಿ ನಡೆದಿದೆ.
ಸಾವನ್ನಪ್ಪಿದ ಯುವಕನನ್ನು ಬಿಹಾರ ಮೂಲದ ಮಿಥುನ್ ಪಾಟೀಲ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಪಟಿಯಾಲ ಜಿಲ್ಲೆಯ ಶಂಕರ್‍ಪುರ ಗ್ರಾಮದ ಜಗಮೋಹನ್ ಸಿಂಗ್ ಮತ್ತು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಭೂಪಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಗಳು ಘಟನೆಯ ನಂತರ ಪರಾರಿಯಾಗಿದ್ದಾರೆ.
ಘಟನೆ ನಡೆದಾಗ ಸ್ಥಳದಲ್ಲೇ ಇದ್ದ ಮಿಥುನ್ ತಂದೆ ಮಾತನಾಡಿ, ನಾನು, ನನ್ನ ಮಗ ಮತ್ತು ಆತನ ಪತ್ನಿ ಊಟದ ನಂತರ ಸುಮಾರು 12 ಗಂಟೆಗೆ, ಗುರುದ್ವಾರದ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದೇವೆ. ಈ ವೇಳೆ ಅಲ್ಲಿಗೆ ಬಂದ ಇಬ್ಬರು, ಈ ಸಮಯದಲ್ಲಿ ಹುಡುಗಿಯ ಜೊತೆ ಇಲ್ಲಿ ಏನೂ ಮಾಡುತ್ತಿದ್ದೀರಾ ಎಂದು ಪ್ರಶ್ನೇ ಮಾಡಿದರು. ಆಗ ಮಿಥುನ್ ಆಕೆ ನನ್ನ ಪತ್ನಿ ಎಂದು ಹೇಳಿದ. ಆಗ ವಾಗ್ವಾದ ನಡೆದು ಓರ್ವ ಮಿಥುನ್‍ಗೆ ಬಾಟಲಿಯಲ್ಲಿ ಹೊಡೆದ ನಂತರ ಇಬ್ಬರು ಸೇರಿ ಕಲ್ಲು ಇಟ್ಟಿಗೆಯಿಂದ ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.
ಪೊಲೀಸರು ಹೇಳುವ ಪ್ರಕಾರ, ಮಿಥುನ್ ತನ್ನ ತಂದೆ ಮತ್ತು ಪತ್ನಿಯ ಜೊತೆಗೆ ಪಾಟಿಯಾಲದ ಕಾರ್ಖಾನೆ ಪ್ರದೇಶದಲ್ಲಿ ವಾಸವಿದ್ದ ಎನ್ನಲಾಗಿದೆ. ಜೊತೆಗೆ ಆತನನ್ನು ಬಿಯರ್ ಬಾಟಲ್, ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಿಥುನ್ ಅನ್ನು ಸರ್ಕಾರಿ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಗ್ರೇನ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಇನ್ಸ್ ಸ್ಪೆಕ್ಟರ್ ಗುರ್ನಮ್ ಸಿಂಗ್, ಹಲ್ಲೆ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ ಅವರು ಘಟನೆಯ ನಂತರ ಪರಾರಿಯಾಗಿದ್ದು, ಅವರನ್ನು ಶೀಘ್ರದಲ್ಲೇ ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.