– ಎಸ್‍ಐಟಿ ವಿರುದ್ಧ ಹೈಕೋರ್ಟಿಗೆ ಅರ್ಜಿ ಸಲ್ಲಿಕೆಗೆ ನಿರ್ಧಾರ
ತುಮಕೂರು: ರಾತ್ರಿ 3.45ಕ್ಕೆ ಮನೆಗೆ ಬಂದ ಎಸ್‍ಐಟಿ ಅಧಿಕಾರಿಗಳು ಮನೆಯನ್ನ ಶೋಧಿಸಿ ನನ್ನ ಮೊಬೈಲ್ ಚೆಕ್ ಮಾಡಿದ್ದಾರೆ. ಅಧಿಕಾರಿಗಳ ತಂಡದಲ್ಲಿ ಮಹಿಳಾ ಸಿಬ್ಬಂದಿ ಇರಲಿಲ್ಲ. ದಿಢೀರ್ ಅಂತ ದಾಳಿ ನಡೆಸಿದ್ದರಿಂದ ವಕೀಲರ ಜೊತೆ ಚರ್ಚಿಸಿ, ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವರ ರಾಸಲೀಲೆ ಪ್ರಕರಣದ ಕಿಂಗ್‍ಪಿನ್ ಎನ್ನಲಾದ ವ್ಯಕ್ತಿಯ ಪತ್ನಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಹಿಳೆ, ರಾತ್ರಿ 3.45ಕ್ಕೆ ಮನೆಯ ಬಾಗಿಲು ಬಡಿದ ಸದ್ದು ಆಯ್ತು. ಬಾಗಿಲು ತೆಗೆದಾಗ ಎಸ್‍ಐಟಿ ಅಧಿಕಾರಿಗಳು ಬಂದಿದ್ದರು. ಮನೆಯೆಲ್ಲಾ ಸರ್ಚ್ ಮಾಡಿದ್ರು, ಮತ್ತೆ ಫೋನ್ ತೆಗೆದುಕೊಂಡು ಕಾಲ್ ಡಿಟೈಲ್ಸ್ ಚೆಕ್ ಮಾಡಿ, ಕರೆ ಬಂದ್ರೆ ನಮಗೆ ಮಾಹಿತಿ ನೀಡಿ ಎಂದು ಹೇಳಿದರು. ಆರು ದಿನಗಳಿಂದ ಪತಿ ನನಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಸದ್ಯ ಪತಿ ಎಲ್ಲಿದ್ದಾರೆ ಅನ್ನೋ ವಿಷಯ ಸಹ ನನಗೆ ಗೊತ್ತಿಲ್ಲ. ಭಾನುವಾರ ಕೊನೆಯ ಬಾರಿ ಬಂದಿದ್ದರು ಎಂದು ಹೇಳಿದ್ದರು.
ಮನೆಯಲ್ಲಿ ನಾನು, ಅತ್ತೆ ಮತ್ತು ಮಗು ಮೂವರೇ ಇದ್ದೀದಿವಿ. ಹೆಣ್ಣು ಮಕ್ಕಳಿರೋ ಮನೆಗೆ ಆ ಸಮಯದಲ್ಲಿ ಬರುವ ಅವಸರ ಏನಿತ್ತು? ಅಧಿಕಾರಿಗಳ ತಂಡದಲ್ಲಿ ಮಹಿಳಾ ಸಿಬ್ಬಂದಿ ಇರಲಿಲ್ಲ. ಹಾಗಾಗಿ ನಮ್ಮ ವಕೀಲರನ್ನ ಸಂಪರ್ಕಿಸಿ ಎಸ್‍ಐಟಿ ವಿರುದ್ಧ ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತೇನೆ. ಮಗಳ ನಾಮಕಾರಣಕ್ಕೆ ಹಲವು ರಾಜಕಾರಣಿಗಳು ಆಗಮಿಸಿದ್ದರು. ನಾಮಕರಣಕ್ಕೆ ರಾಜಕಾರಣಿಗಳು ಬಂದ್ರೆ ಏನು ತಪ್ಪು? ನಾಮಕರಣದ ಫೋಟೋ ಅಲ್ಬಂ ಕೇಳಿದರು. ನಾವು ಅಲ್ಬಂ ಮಾಡಿಸಿಲ್ಲ ಎಂದು ಹೇಳಿದೆ. ಸುಮಾರು 4.30ಕ್ಕೆ ಅಧಿಕಾರಿಗಳು ಮನೆಯಿಂದ ಹಿಂದಿರುಗಿದರು ಎಂದರು.
ಪತಿ ತಮ್ಮ ಕೆಲಸದ ಬಗ್ಗೆ ಹೇಳುತ್ತಿರಲಿಲ್ಲ. ಪತಿಯ ವಿರುದ್ಧ ಕೆಲ ಆರೋಪಗಳು ಕೇಳಿ ಬಂದಿವೆ. ಆದ್ರೆ ಪತಿ ಆರೋಪಗಳಿಂದ ಮುಕ್ತರಾಗಿ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.