ಮಂಡ್ಯ: ರಾತ್ರಿ ಇಡೀ ಎಣ್ಣೆ ಪಾರ್ಟಿ ಮಾಡಿದವರು ಬೆಳಗ್ಗೆ ಹೊತ್ತಿಗೆ ಕೊಲೆಯಾಗಿ ಹೆಣವಾಗಿ ಮಲಗಿರುವ ಘಟನೆ ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜರುಗಿದೆ.
ಯಲಿಯೂರು ಸಮೀಪದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜು (44) ಹಾಗೂ ರಾಮಮೂರ್ತಿ (46) ಕೊಲೆಯಾದರು. ಬಸವರಾಜು ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದವರಾಗಿದ್ದು, ರಾಮಮೂರ್ತಿ ಮೂಲತಃ ತುಮಕೂರಿನ ಮೂಲದವರಾಗಿದ್ದಾರೆ. ಇಬ್ಬರೂ 8 ವರ್ಷಗಳಿಂದ ಈ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ ರಾತ್ರಿ ಇಬ್ಬರೂ ಬಾರ್‍ಗೆ ಹೋಗಿ ಎಣ್ಣೆ ತಂದು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಇವರೊಂದಿಗೆ ಮತ್ತೊಬ್ಬ ಪಾರ್ಟಿಯಲ್ಲಿ ಇದ್ದ ಎನ್ನಲಾಗುತ್ತಿದೆ. ಪಾರ್ಟಿ ಮುಗಿಸಿ ರಾತ್ರಿ 2 ಗಂಟೆಯ ವೇಳೆಗೆ ನಿದ್ದೆ ಮಾಡಿದ್ದಾರೆ. ನಂತರ ಬೆಳಗ್ಗೆ 5 ಗಂಟೆಗೆ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರ ನೋಡಿದಾಗ ಇಬ್ಬರೂ ಹೆಣವಾಗಿದ್ದಾರೆ. ಆಘಾತಗೊಂಡ ನೌಕರ ಕೊಲೆಯಾಗಿರಬಹುದು ಎಂದು ಶಂಕಿಸಿದ್ದಾನೆ.
ವಿಷಯವನ್ನು ತಕ್ಷಣವೇ ಪೊಲೀಸರಿಗೆ ತಿಳಿಸಲಾಗಿದೆ. ಇಬ್ಬರನ್ನೂ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ಮಾಡಿ, ಹೊಡೆದು ಕೊಲೆ ಮಾಡಲಾಗಿದೆ ತಿಳಿದು ಬಂದಿದೆ. ಮಂಡ್ಯ ಎಸ್‍ಪಿ ಪರಶುರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.