ಭೋಪಾಲ್: ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಅವರು ತಂಗಿದ್ದ ಸರ್ಕ್ಯೂಟ್ ಹೌಸ್‍ನಲ್ಲಿ ಸೊಳ್ಳೆಗಳು ಅತಿಯಾಗಿ ಕಾಟ ಕೊಟ್ಟ ಕಾರಣಕ್ಕಾಗಿ ಸಕ್ಯೂರ್ಟ್ ಹೌಸ್‍ನ ನಿರ್ವಹಣೆ ಮಾಡುತ್ತಿದ್ದ ಇಂಜಿನಿಯರ್ ನನ್ನು ಅಮಾನತು ಗೊಳಿಸುವಂತೆ ಸಿಎಂ ಆದೇಶ ಹೊರಡಿಸಿದ್ದಾರೆ.
ಶಿವರಾಜ್ ಚವ್ಹಾಣ್ ಕೆಲ ದಿನಗಳ ಹಿಂದೆ ಬಸ್ ಅಪಘಾತದಿಂದಾಗಿ ಬದುಕುಳಿದಿದ್ದ ಜನರನ್ನು ಭೇಟಿಯಾಗಲು ಸಿಧಿಗೆ ಆಗಮಿಸಿ ಸಕ್ಯೂರ್ಟ್ ಹೌಸ್‍ನಲ್ಲಿ ಉಳಿದುಕೊಂಡಿದ್ದರು. ರಾತ್ರಿ ಸಿಎಂ ಮಲಗುತ್ತಿದ್ದಂತೆ ರೂಂ ತುಂಬಾ ಸೊಳ್ಳೆಗಳ ಕಾಟ ಶುರುವಾಗಿದೆ. ಇದರಿಂದ ನಿದ್ದೆ ಬರದೆ ಒದ್ದಾಡಿದ ಚವ್ಹಾಣ್ ರಾತ್ರಿ 2.30 ಸುಮಾರಿಗೆ ಸೊಳ್ಳೆ ನಿವಾರಕವನ್ನು ಸಿಂಪಡಿಸಿ ಮಲಗಿದ್ದರು. ಆದರೆ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಮತ್ತೆ ನೀರಿನ ಟ್ಯಾಂಕ್‍ನಲ್ಲಿ ನೀರು ತುಂಬಿ ಹೊರ ಚೆಲ್ಲುತ್ತಿತ್ತು. ಯಾರು ಕೂಡ ನೀರನ್ನು ನಿಲ್ಲಿಸುವ ಕಾರ್ಯದಲ್ಲಿ ಮುಂದಾಗಿರಲಿಲ್ಲ. ಇದರಿಂದಾಗಿ ಚವ್ಹಾಣ್ ನೀರನ್ನು ನಿಲ್ಲಿಸಿ ಮಲಗಿದ್ದರಂತೆ. ಈ ಪರಿಸ್ಥಿತಿಗಳನ್ನೆಲ್ಲ ಗಮನಿಸಿದ ಸಿಎಂ ಸಕ್ರ್ಯೂಟ್ ಹೌಸ್‍ನ ಸರಿಯಾದ ನಿರ್ವಹಣೆ ಮಾಡದೇ ಇರುವ ಕಾರಣಕ್ಕಾಗಿ ಉಸ್ತುವಾರಿ ಇಂಜಿನಿಯರ್ ನನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.
ಸರ್ಕ್ಯೂಟ್ ಹೌಸ್‍ನ ಸ್ವಚ್ಛತೆ ಮತ್ತು ಉಸ್ತುವಾರಿಯಲ್ಲಿನ ಲೋಪ, ಸೊಳ್ಳೆಗಳ ಕಾಟ ಹಾಗೂ ಸರ್ಕಾರಿ ಆದೇಶದಂತೆ ಅತಿಥಿಗಳಿಗೆ ಸರಿಯಾಗಿ ಆತಿಥ್ಯ ಕೊಡದ ಕಾರಣಕ್ಕಾಗಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಬಾಬುಲಾಲ್ ಗುಪ್ತ ಅವರ ಮೇಲೆ ಕೇಳಿ ಬಂದಿರುವ ಆರೋಪದ ಮೆರೆಗೆ ಅಮಾನತು ಮಾಡಿದ್ದೇವೆ ಎಂದು ರೇವಾ ವಿಭಾಗೀಯ ಆಯುಕ್ತ ರಾಜೇಶ್ ಕುಮಾರ್ ಜೈನ್ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.