ಚಿತ್ರದುರ್ಗ: ಸತತ 6ನೇ ಬಾರಿಗೆ ಚಿತ್ರದುರ್ಗದ ತಾಲೂಕಿನ ಮಲ್ಲಾಪುರ ಕೆರೆ ಕೋಡಿ ಬಿದ್ದಿದೆ.
ಮಲ್ಲಾಪುರ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಂಡರ್ ಪಾಸ್ ಕೆಳಗೆ ನದಿಯಂತೆ ನೀರು ಹರಿಯುತ್ತಿದೆ. ಪರಿಣಾಮ ವಾಹನ ಸವಾರರು, ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ.
ವರುಣನ ಆರ್ಭಟಕ್ಕೆ ಕೋಟೆನಾಡಿನ ಜನರು ತತ್ತರಿಸಿ ಹೋಗಿದ್ದಾರೆ. ಚಿತ್ರದುರ್ಗದ ವಿವಿಧೆಡೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗಿದೆ. ಅಲ್ಲದೆ ಮನೆಗಳು, ರಸ್ತೆಗಳೆಲ್ಲಾ ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತ, ದವಸಧಾನ್ಯಗಳೆಲ್ಲ ನೀರುಪಾಲಾಗಿವೆ. ಜನ ನಗರಸಭೆಯ ಅವೈಜ್ಞಾನಿಕ ರಸ್ತೆ ನಿರ್ಮಾಣಕ್ಕೆ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ಇಂದಿನಿಂದ 13ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ವಿಜಯಪುರ, ರಾಯಚೂರು, ಕಲಬುರಗಿ, ಬೀದರ್, ಬಾಗಲಕೋಟೆ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮಲೆನಾಡಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದೆ. ಚಿಕ್ಕಮಗಳೂರು, ಕಳಸ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಭಾರೀ ಮಳೆಯಾಗಿದೆ. ಕಳಸ, ಹೊರನಾಡು ಸೇರಿದಂತೆ ಹಲವೆಡೆ ಸತತ ಅರ್ಧ ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಜನರು ಹೈರಾಣಾಗಿದ್ದಾರೆ.