– ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಅವಾಂತರ
– 2 ದಿನ ಮಳೆ ಆಗುವ ಮುನ್ಸೂಚನೆ
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರ ಹಾಗೂ ತೆಲಂಗಾಣದಲ್ಲಿ ಭಾರೀ ವರ್ಷಧಾರೆ ಉಂಟಾಗಿದೆ. ಇದರ ಪರಿಣಾಮ ಕರ್ನಾಟಕದ ಮೇಲಾಗಿದ್ದು, ನಾನಾ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಬೆಂಗಳೂರಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ರಾತ್ರಿ ಸುರಿಯುವ ಮಳೆಗೆ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ಶಿವಾನಂದ ಸರ್ಕಲ್‍ನ ಅಂಡರ್‌ಪಾಸ್‌ನಲ್ಲಿ 2 ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಿದ್ದರು.
Advertisement
Advertisement
ಹೆಬ್ಬಾಳದ ಗುಡ್ಡದ ಹಳ್ಳಿ, ಗಂಗಮ್ಮ ಬಡಾವಣೆಗೆ ನೀರು ನುಗಿತ್ತು. ಲೇಔಟ್‍ನ ರಸ್ತೆಗಳು ಕೆರೆಗಳಾಗಿ ಮಾರ್ಪಟ್ಟಿತ್ತು. ಈ ವೇಳೆ ಅಲ್ಲಿನ ಸ್ಥಳೀಯರೇ ಮ್ಯಾನ್‍ಹೋಲ್ ತೆಗೆದು ನೀರು ಹೋಗಲು ವ್ಯವಸ್ಥೆ ಮಾಡಿದ್ದರು. ಇನ್ನೂ ಕೆ.ಆರ್ ಸರ್ಕಲ್ ಅಂಡರ್‌ಪಾಸ್, ಗುಟ್ಟಹಳ್ಳಿ ರಸ್ತೆಗಳು ಜಲಾವೃತವಾಗಿತ್ತು. ಬನ್ನೇರುಘಟ್ಟದಲ್ಲಿ ಗೋಡೆಯೊಂದು ಕುಸಿದಿದ್ದು, ಭಾರೀ ನೀರು ನುಗ್ಗಿದೆ. ಪರಿಣಾಮ ಪ್ರಾಣಿಗಳು ಪರದಾಡಿವೆ.
Advertisement
Advertisement
ಬೆಂಗಳೂರು ಅಷ್ಟೇ ಅಲ್ಲ ಗದಗದಲ್ಲೂ ಭಾರೀ ಮಳೆಯಾಗಿದೆ. ನರಗುಂದ ಬಳಿ ಸುರಿದ ಮಳೆಗೆ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ಮನೆಗಳಿಗೆಲ್ಲಾ ನೀರು ನುಗ್ಗಿದೆ. ಬಾಬಾ ಸಾಹೇಬ್ ತಾಲೂಕು ಆಸ್ಪತ್ರೆಯ ಕ್ವಾರ್ಟರ್ಸ್ ಗೆ ನೀರು ನುಗ್ಗಿದ ಪರಿಣಾಮ 2 ದಿನದ ಬಾಣಂತಿ ಭಾರತಿ ಪಾಟೀಲ್, ಹಸುಗೂಸು ಹಾಗೂ ಚಿಕ್ಕ ಮಕ್ಕಳು ಪರದಾಡಿದ್ದಾರೆ. ದವಸ ಧಾನ್ಯಗಳು ನೀರುಪಾಲಾಗಿವೆ. ತಾಲೂಕು ಆಸ್ಪತ್ರೆಯ ಆವರಣ ಸಂಪೂರ್ಣ ಕೆರೆಯಂತೆ ನಿರ್ಮಾಣವಾಗಿದ್ದು, ರೋಗಿಗಳು ಸಾರ್ವಜನಿಕರು ಸಾಕಷ್ಟು ಪರದಾಡಿದ್ದಾರೆ. ಜೆಸಿಬಿ ಮೂಲಕ ನೀರು ಹೊರಹಾಕಲು ಮುಂದಾದರು. ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ.
ಇತ್ತ ಬೆಳಗಾವಿಯ ಹುಕ್ಕೇರಿ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳ ಜಮೀನುಗಳು ಜಲಾವೃತಗೊಂಡಿವೆ. ನಾಲೆಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳ ಮೇಲೂ ನೀರು ನಿಂತು ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು. ಚಿತ್ರದುರ್ಗದಲ್ಲಿ ರಾತ್ರಿ ಇಡೀ ಸುರಿದ ಮಳೆಗೆ ಮಲ್ಲಾಪುರ ಕೆರೆ ಸತತ 6ನೇ ಬಾರಿಗೆ ಕೋಡಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್‍ಗೆ ನೀರು ನುಗ್ಗಿ ಭಾರೀ ಅವಾಂತರವಾಗಿದೆ.
ಬಳ್ಳಾರಿ, ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರದಲ್ಲೂ ಮಳೆಯಾಗಿದ್ದು, ಧಾರವಾಡದಲ್ಲಿ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನೂ ಎರಡು ದಿನ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.