ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಚುನಾವಣೆ ಮುಂದೂಡಿಕೆಗೆ ಕಾರಣ: ಎಎಪಿ

Public TV
2 Min Read
AAP

ಬೆಂಗಳೂರು: ರಾಜ್ಯದ ಜನತೆಗೆ ಲಸಿಕೆ ನೀಡಲು ಸರ್ಕಾರ ನಿರ್ಲಕ್ಷ್ಯ ತೋರಿರುವುದೇ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಮುಂದೂಡಲು ಕಾರಣ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.

cm bs yediyurappa

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಎಪಿಯ ರಾಜ್ಯ ಉಪಸಂಚಾಲಕಿ ಶಾಂತಲಾ ದಾಮ್ಲೆರವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ಬರುವುದೇ ಚುನಾವಣೆಗಳಿಂದ. ರಾಜ್ಯ ಸರ್ಕಾರವು ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ಮುಂದೂಡಿದ್ದರಿಂದ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಸರ್ಕಾರವು ಸರಿಯಾಗಿ ಕೋವಿಡ್ ಲಸಿಕೆ ನೀಡಿದ್ದರೆ ಇಂದು ಚುನಾವಣೆಯನ್ನು ಮುಂದೂಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಅಧಿಕಾರ ಉಳಿಸಿಕೊಳ್ಳಲು, ಕುರ್ಚಿಗಾಗಿ ಲಾಬಿ ಮಾಡಲು ಪದೇಪದೇ ದೆಹಲಿಗೆ ಹೋಗುವ ಸಿಎಂ ಹಾಗೂ ಸಚಿವರು ಕೇಂದ್ರದಿಂದ ಲಸಿಕೆ ತರಿಸಿ ವಿತರಿಸಲು ನಿರ್ಲಕ್ಷ್ಯ ತೋರುತ್ತಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಜುಲೈ 20ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ – ಪಿಯುಸಿ ಬೋರ್ಡ್

FotoJet 9 2

ಜೂನ್ 21ರಂದು ರಾಜ್ಯದ 11 ಲಕ್ಷ ಜನರಿಗೆ ಲಸಿಕೆ ನೀಡಲಾಗಿತ್ತು. ನಂತರ ಅದು ನಿಧಾನವಾಗಿ ಕಡಿಮೆಯಾಗಿ ಈಗ 1 ಲಕ್ಷಕ್ಕೆ ಬಂದು ನಿಂತಿದೆ. ಈವರೆಗೆ ಕೇವಲ 30% ಜನರಿಗೆ ಮಾತ್ರ ಲಸಿಕೆ ನೀಡಲಾಗಿದ್ದು, ಇದೇ ರೀತಿ ಲಸಿಕೆ ನೀಡುವ ಪ್ರಮಾಣವನ್ನು ಕಡಿಮೆ ಮಾಡುತ್ತಾ ಹೋದರೆ ಮೂರು ವರ್ಷವಾದರೂ ಎಲ್ಲರಿಗೂ ಲಸಿಕೆ ಸಿಗುವುದಿಲ್ಲ. ದಿನಕ್ಕೆ 11 ಲಕ್ಷ ಜನರಿಗೆ ಲಸಿಕೆ ನೀಡುವ ಸಾಮರ್ಥ್ಯವಿದ್ದರೂ ಕೇವಲ ಒಂದು ಲಕ್ಷ ಲಸಿಕೆ ನೀಡುತ್ತಿರುವುದಕ್ಕೆ ಕಾರಣವೇನು? ಲಸಿಕೆ ಕೊರತೆಯಿಲ್ಲ ಎಂದು ಸುಳ್ಳು ಹೇಳಿ ಜನತೆಯನ್ನು ವಂಚಿಸುತ್ತಿರುವ ಆರೋಗ್ಯ ಸಚಿವರಿಗೆ ನಾಚಿಕೆಯಾಗಬೇಕು ಎಂದು ಶಾಂತಲಾ ದಾಮ್ಲೆಯವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

SUDAKAR 2

ಎಎಪಿಯ ರಾಜ್ಯ ಯುವಘಟಕದ ಅಧ್ಯಕ್ಷರಾದ ಮುಕುಂದ್ ಗೌಡರವರು ಮಾತನಾಡಿ, ರಾಜ್ಯದ ಜನರು ಈಗಲೂ ಕೊರೊನಾ ಆತಂಕದಲ್ಲಿ ಬದುಕುತ್ತಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಕೊರೊನಾ ರೋಗಿಗಳಿಗೆ ಬೆಡ್, ಆಕ್ಸಿಜನ್ ಕಲ್ಪಿಸುವುದರಲ್ಲಿ ವಿಫಲವಾಗಿದ್ದ ಸರ್ಕಾರವು ಈಗ ಲಸಿಕೆ ನೀಡುವುದರಲ್ಲಿಯೂ ವಿಫಲವಾಗಿದೆ. ಕಮಿಷನ್ ಆಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಯನ್ನು ಮಾರಿಕೊಂಡು ಸರ್ಕಾರಿ ಆಸ್ಪತ್ರೆಗಳಲ್ಲಿ ಕೃತಕ ಅಭಾವ ಸೃಷ್ಟಿಸಿದೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜ್ಯದ ಜನರು ಆಡಳಿತದ ವಿರುದ್ಧ ನಿಲುವು ಹೊಂದಿದ್ದಾರೆ ಎಂಬುದು ಸರ್ಕಾರಕ್ಕೆ ಗೊತ್ತಿದೆ. ಸೋಲಿನ ಭಯದಿಂದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಮುಂದೂಡಿದೆ. ಮಾರ್ಕೆಟ್, ಮಾಲ್ ಮುಂತಾದ ಜನಸಂದಣಿ ಪ್ರದೇಶಗಳಿಗೆ ಅವಕಾಶ ನೀಡಿರುವಾಗ, ಚುನಾವಣೆ ನಡೆಸಲು ಮಾತ್ರ ಕೋವಿಡ್ ನೆಪ ಹೇಳುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *