ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಈಗಾಗಲೇ ರಾಜ್ಯದ 8 ನಗರಗಳಲ್ಲಿ ಕೊರೊನಾ ಕರ್ಫ್ಯೂ ಆರಂಭವಾಗಿದೆ.
ಸಿಲಿಕಾನ್ ಸಿಟಿಯ ಫ್ಲೈಓವರ್ ಗಳು, ಬಾರ್, ಪಬ್, ಅಂಗಡಿ ಮುಂಗಟ್ಟುಗಳು ಎಲ್ಲವೂ ಬಂದ್ ಆಗಿವೆ. ಬೆಂಗಳೂರಿನ ಪ್ರಮುಖ ಸ್ಥಳಗಳನ್ನು ಬಂದ್ ಮಾಡಲಾಗಿದೆ. ಪೊಲೀಸರು ಕೂಡ ಬ್ಯಾರಿಕೇಡ್ ಗಳನ್ನು ಹಾಕಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಯಶವಂತಪುರ ಸರ್ಕಲ್ ಬಳಿ ವಾಹನಗಳು ಹಾಗೂ ಜನರ ಓಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ರೂಲ್ಸ್ ಬ್ರೇಕ್ ಮಾಡಿ ಓಡಾಟ ನಡೆಸ್ತಿರುವವರಿಗೆ ಪೊಲೀಸರು ನೀತಿ ಪಾಠ ಹೇಳ್ತಾ, ದಂಡ ವಿಧಿಸ್ತಿದ್ದಾರೆ. ಅಲ್ಲದೆ ಕೆಲವು ಕಡೆಗಳಲ್ಲಿ ಪೊಲಿಸರು ಲಾಠಿ ರುಚಿ ತೋರಿಸುತ್ತಿದ್ದಾರೆ.
ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕೂಡ ತೀವ್ರ ನಿಗಾ ವಹಿಸಲಾಗಿದ್ದು, ಅಶ್ವರೋಹಿ ದಳದ ಪಥ ಸಂಚಲನ ನಡೆಯುತ್ತಿದೆ. ಹೀಗಾಗಿ ಬೇಕಾ ಬಿಟ್ಟಿ ಹೊರಬಂದ್ರೆ ದಂಡ ಬೀಳುವುದು ಪಕ್ಕಾ ಆಗಿದೆ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಕುದುರೆ ಏರಿ ನಗರ ಸಂಚಾರ ಮಾಡಿದರು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಗಲ್ಲಿ ಗಲ್ಲಿಯೂ ಸರ್ಪಗಾವಲು ಇರಿಸಲಾಗಿದೆ.
ಬೀದರ್ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಅಲ್ಲದೆ ಅಡ್ಡಾದಿಡ್ಡಿ ಓಡಾಡುವವರಿಗೆ ಫೈನ್ ಹಾಕಿದ್ದಾರೆ. ಮೊದಲನೇಯ ಬಾರಿಗೆ ಕೆಲವರಿಗೆ ಎಚ್ಚರಿಕೆಯನ್ನು ನೀಡಿ ಪೊಲೀಸರು ಬಿಟ್ಟಿದ್ದಾರೆ. ಒಟ್ಟಿನಲ್ಲಿ ಬೀದರ್ ನಗರ ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ನಗರದ ಅಂಬೇಡ್ಕರ್ ವೃತದಲ್ಲಿ ಪೊಲೀಸ್ ಸರ್ಪಗಾವಲು ಇರಿಸಲಾಗಿದೆ.
ಇತ್ತ ಉಡುಪಿಯ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಲ್ಲಿ ಪೊಲೀಸ್ ಸರ್ಪಗಾವಲು ಇದ್ದು, ಜಿಲ್ಲಾಧಿಕಾರಿ ಜಿ ಜಗದೀಶ್ ಉಡುಪಿ-ಮಣಿಪಾಲ ರೌಂಡ್ಸ್ ಹೊಡೆದಿದ್ದಾರೆ. ಅಲ್ಲಲ್ಲಿ ವಾಹನಗಳನ್ನು ತಡೆದು ನಿಲ್ಲಿಸಿ ಡಿಸಿ ವಿಚಾರಣೆ ನಡೆಸಿದ್ದಾರೆ. ರಸ್ತೆಯಲ್ಲಿ ಓಡಾಡುವವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ನಾಳೆಯಿಂದ ವಾಹನವನ್ನು ಸೀಜ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಇಂದಿನಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಹೇರಲಾಗಿದೆ. ಆದರೆ ಇದಕ್ಕೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.