ರಾಜ್ಯದ 16% ಜನರಲ್ಲಿ ಕೋವಿಡ್ ಪ್ರತಿಕಾಯ ಪತ್ತೆ: ಸುಧಾಕರ್

Public TV
2 Min Read
sudhakar

– ಸೆರೋ ಸರ್ವೆಯಲ್ಲಿ ಪ್ರತಿಕಾಯ ಮೂಲಕ ಸೋಂಕು ಪರೀಕ್ಷೆ
– ಡಿಸೆಂಬರ್ ಅಂತ್ಯ ಹಾಗೂ ಮಾರ್ಚ್ ಅಂತ್ಯದಲ್ಲಿ ಮತ್ತೆ ಸರ್ವೆ

ಬೆಂಗಳೂರು : ರಾಜ್ಯದಲ್ಲಿ 16% ರಷ್ಟು ಜನರಲ್ಲಿ ಕೋವಿಡ್ ಪ್ರತಿಕಾಯ ಇದೆ ಎಂಬ ಅಂಶ ಸೆರೋ ಸರ್ವೆಯಲ್ಲಿ ತಿಳಿದುಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈ, ಪುಣೆ, ದೆಹಲಿ ನಗರಗಳಲ್ಲಿ ಕೆಲ ಸ್ಥಳಗಳಲ್ಲಿ ಸರ್ವೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಎಲ್ಲ 30 ಜಿಲ್ಲೆಗಳಲ್ಲೂ ಸರ್ವೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಎಂಟು ವಲಯಗಳಲ್ಲೂ ನಡೆದಿದೆ. 16,585 ಜನರ ಮಾದರಿಗಳನ್ನು ಪಡೆದು ಪರೀಕ್ಷೆ ಮಾಡಿದ್ದು, 15,624 ಜನರ ಫಲಿತಾಂಶ ಬಂದಿದೆ. ಹಿಂದೆ ಹಾಗೂ ಸರ್ವೆ ಮಾಡುವ ಸಮಯದಲ್ಲಿ ಸೋಂಕಿಗೆ ಒಳಗಾಗಿದ್ದವರ ಒಟ್ಟು ಪ್ರಮಾಣ 27.3% ರಷ್ಟಿದೆ ಎಂದು ತಿಳಿಸಿದರು.

karnaatka corona test

ಕಡಿಮೆ ರಿಸ್ಕ್, ಮಧ್ಯಮ ರಿಸ್ಕ್ ಮತ್ತು ಹೆಚ್ಚು ರಿಸ್ಕ್ ಎಂದು ವರ್ಗೀಕರಣ ಮಾಡಿ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ವೈರಸ್ ದೇಹಕ್ಕೆ ಬಂದಾಗ ಪ್ರತಿರೋಧಕವಾಗಿ ಐಜಿಜಿ ಉತ್ಪತ್ತಿಯಾಗುತ್ತದೆ. ಐಜಿಜಿ ಹೊಂದಿದವರು ಹಾಗೂ ಸಕ್ರಿಯ ಸೋಂಕಿತರನ್ನು ಪತ್ತೆ ಮಾಡುವ ಮೂಲಕ ಈ ಸರ್ವೆಯನ್ನು ಕ್ರಮಬದ್ಧವಾಗಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

15,624 ಜನರಲ್ಲಿ ಐಜಿಜಿ ಪ್ರತಿಕಾಯ ಇರುವವರ ಪ್ರಮಾಣ 16.4% ಇದೆ. ಅಂದರೆ ಇಷ್ಟು ಜನರು ಸೋಂಕಿಗೊಳಗಾಗಿ ಗುಣಮುಖರಾಗಿದ್ದಾರೆ. ಈ ಪ್ರಮಾಣ ದೆಹಲಿಯಲ್ಲಿ 29.1%, ಮುಂಬೈ ಸ್ಲಮ್ ರಹಿತ ಪ್ರದೇಶಗಳಲ್ಲಿ 16% ಹಾಗೂ ಸ್ಲಮ್ ಗಳಲ್ಲಿ 57%, ಪುಣೆಯ 5 ಪ್ರದೇಶಗಳಲ್ಲಿ 36.1 ರಿಂದ 65.4%, ಇಂದೋರ್ ನಲ್ಲಿ 7.8%, ಪಾಂಡಿಚೆರಿಯಲ್ಲಿ 22.7%, ಚೆನ್ನೈನಲ್ಲಿ 32.3% ಇದೆ. 15,624 ಜನರಲ್ಲಿ ಸಕ್ರಿಯ ಸೋಂಕಿತರ ಪ್ರಮಾಣ 12.7% ರಷ್ಟಿದೆ ಎಂದು ವಿವರಿಸಿದರು.

karnataka 123

ಈ ಸರ್ವೆ 2020 ರ ಸೆಪ್ಟೆಂಬರ್ 3 ರಿಂದ 16 ರವರೆಗೆ ನಡೆದಿತ್ತು. ಕೋವಿಡ್ ಮರಣ ಪ್ರಮಾಣವನ್ನು ಸೋಂಕಿಗೆ ಒಳಗಾದ ಒಟ್ಟು ಜನರಿಗೆ ಹೋಲಿಸಿದರೆ, ಬಹಳ ಕಡಿಮೆ ಇದೆ. ರಾಜ್ಯದಲ್ಲಿ ಮರಣ ಪ್ರಮಾಣ 0.05% ಇದೆ. ಮುಂಬೈಯಲ್ಲಿ 0.05-0.10%, ಪುಣೆಯಲ್ಲಿ 0.08%, ದೆಹಲಿಯಲ್ಲಿ 0.09%, ಚೆನ್ನೈನಲ್ಲಿ 0.13% ಮರಣ ಪ್ರಮಾಣವಿದೆ ಎಂದು ವಿವರಿಸಿದರು.

ಹೆಚ್ಚು ಪರೀಕ್ಷೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು, ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಜಾರಿ ಮಾಡಲು ಈ ಸರ್ವೆ ನೆರವಾಗಲಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಬಹಳ ಕಡಿಮೆ ಇದೆ. ಗುಣಮುಖರ ಪ್ರಮಾಣ 95% ಇದೆ ಎಂದು ತಿಳಿಸಿದರು.

ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ ವರದಿ ನೀಡಲು ತಜ್ಞರಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು. ಕೋವಿಡ್ ಸೋಂಕಿಗೊಳಗಾಗಿ ಗುಣಮುಖರಾದವರ ಆರೋಗ್ಯದ ನಿಗಾ ಇರಿಸಲು ಪುನರ್ವಸತಿ ಕೇಂದ್ರ ಆರಂಭಿಸಲಾಗುವುದು ಎಂದು ಹೇಳಿದರು.

ಇದೇ ರೀತಿ ಡಿಸೆಂಬರ್ ಅಂತ್ಯದಲ್ಲಿ ಒಂದು ಹಾಗೂ ಮಾರ್ಚ್ ಅಂತ್ಯಕ್ಕೆ ಮತ್ತೊಂದು ಸರ್ವೆ ನಡೆಸಲಾಗುವುದು ಎಂದು ತಿಳಿಸಿದರು. ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಕೋವಿಡ್ ಸರ್ವೆ ಸಮಿತಿಯ ಮುಖ್ಯಸ್ಥ ಡಾ.ಗಿರಿಧರ ಬಾಬು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *