ಚಾಮರಾಜನಗರ: ಅಳಿವಿನಂಚಿಗೆ ತಲುಪಿದ ಹುಲಿ ಸಂತತಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದಿದೆ. ರಾಜ್ಯದ ಅರಣ್ಯ ಇಲಾಖೆಗಳು ಹಮ್ಮಿಕೊಂಡ ಯೋಜನೆಗಳ ಫಲವಾಗಿ ಹುಲಿ ಸಂರಕ್ಷಣೆಯಲ್ಲಿ ವಿಶ್ವದಲ್ಲೇ ಭಾರತ ಮುಂಚೂಣಿಯಲ್ಲಿದ್ದು, ಕರ್ನಾಟಕ ದೇಶದಲ್ಲೇ 2ನೇ ಸ್ಥಾನವನ್ನ ಪಡೆದಿದೆ. ಹಳೇ ಮೈಸೂರು ಭಾಗದಲ್ಲಿ 363ಕ್ಕೂ ಹೆಚ್ಚು ಹುಲಿಗಳು ನೆಲೆ ಕಂಡುಕೊಂಡಿವೆ. ಇಂದು ರಾಷ್ಟ್ರೀಯ ಹುಲಿ ದಿನಾಚರಣೆಯ ಪ್ರಯುಕ್ತ ವಿಶೇಷ ವರದಿ .
ರಾಜ್ಯದ ದಕ್ಷಿಣ ಭಾಗದಲ್ಲಿ ಹುಲಿಗಳಿಗೆ ಹಿತಕರ ಹವಾಗುಣವಿದ್ದು, ಸದ್ಯ ಹಳೇ ಮೈಸೂರು ಭಾಗದಲ್ಲಿ 363ಕ್ಕೂ ಹೆಚ್ಚು ಹುಲಿಗಳು ನೆಲೆ ಕಂಡಿದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಒಟ್ಟು 4 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಅದರಲ್ಲೂ ಚಾಮರಾಜ ಜಿಲ್ಲೆಯೊಂದರಲ್ಲೇ 3 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಹುಲಿಗಳ ಸುರಕ್ಷಿತ ನೆಲೆ, ಸಂತಾನವೃದ್ದಿಗೆ ಸೂಕ್ತ ವಾತಾವರಣವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹುಲಿಗಳು ಹಳೇ ಮೈಸೂರು ಪ್ರಾಂತ್ಯದಲ್ಲಿ ಸುರಕ್ಷಿತ ನೆಲೆ ಕಂಡುಕೊಂಡಿದೆ. 2018ರ ಹುಲಿ ಗಣತಿಯಲ್ಲಿ ವಿಶ್ವದಲ್ಲಿ 3,900 ಹುಲಿಗಳೀರುವುದನ್ನ ಖಾತರಿಪಡಿಸಿದೆ. ಆದರಲ್ಲಿ ಭಾರತದಲ್ಲೇ 2,967 ಹುಲಿಗಳಿವೆ. ಭಾರತದ 20 ರಾಜ್ಯಗಳಲ್ಲಿ ಹುಲಿಗಳ ನೆಲೆಗಳಿವೆ. 2018ರಲ್ಲಿ ದೇಶದಲ್ಲಿದ್ದ 2,967 ಹುಲಿಗಳಲ್ಲಿ ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು, ಆ ರಾಜ್ಯ ಮೊದಲ ಸ್ಥಾನದಲ್ಲಿದೆ. ಕರ್ನಾಟಕ 524 ಹುಲಿಗಳೊಂದಿಗೆ 2ನೇ ಹಾಗೂ 442 ಹುಲಿಗಳಿರುವ ಉತ್ತರಾಖಂಡ್ 3ನೇ ಸ್ಥಾನದಲ್ಲಿದೆ.
Advertisement
Advertisement
ಗಂಧದ ಗುಡಿ ಎಂದೇ ಕರೆಯಲ್ಪಡುವ ರಾಜ್ಯ, ಅರಣ್ಯ ಸಂಪತ್ತಿನ ನೆಲೆಬೀಡಾಗಿದೆ. ಬೆಟ್ಟ-ಗುಟ್ಟ, ನದಿ ತೊರೆ, ಕಾಡಾನ್ನು ಮಡಿಲಲ್ಲಿಟ್ಟುಕೊಂಡಿದೆ. ಆನೆ, ಹುಲಿ ಸೇರಿದಂತೆ ನಾನಾ ಬಗೆಯ ವನ್ಯಜೀವಿಗಳ ಆವಾಸ ಸ್ಥಾನವೂ ಆಗಿದೆ. ಹಳೇ ಮೈಸೂರು ಪ್ರಾಂತ್ಯ 4 ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದ್ದು, 326 ಹುಲಿಗಳು ಇಲ್ಲಿ ವಾಸ ಮಾಡುತ್ತಿದೆ.
Advertisement
ಇನ್ನೂ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ಬರುವ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2018ರ ಹುಲಿ ಗಣತಿ ಪ್ರಕಾರ 127 ಹುಲಿಗಳಿವೆ. 1,020 ಚ.ಕಿ.ಮೀ ವಿಸ್ತಾರದ ಮೂಲ ಅರಣ್ಯ ಪ್ರದೇಶದಲ್ಲಿ 380 ಕ್ಯಾಮೆರಾಗಳಲ್ಲಿ 3 ಹಂತ ಬಳಸಿ ಗಣತಿ ಮಾಡಲಾಗಿತ್ತು. ಅದರೆ ಸದ್ಯ ಬಂಡೀಪುರದಲ್ಲಿ 150ಕ್ಕೂ ಹೆಚ್ಚು ಹುಲಿಗಳಿವೆ. ಮರಿಗಳು ಇದ್ದು ಇದರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎನ್ನುತ್ತಾರೆ ಬಂಡೀಪುರ ಅರಣ್ಯದ ನಿರ್ದೇಶಕ ಬಾಲಚಂದ್ರ.
Advertisement
ಬಿಳಿಗಿರಿರಂಗನಬೆಟ್ಟದ ಹುಲಿ ಸಂರಕ್ಷಿತ ಪ್ರದೇಶ 572 ಚದರ ಕಿ.ಮೀ ವಿಸ್ತಾರವಿದೆ. 6 ವಲಯ, 2 ಉಪವಿಭಾಗಗಳಿವೆ. ಗಣತಿಯಲ್ಲಿ 55-65 ಹುಲಿಗಳು ಪತ್ತೆಯಾಗಿದೆ. 1200 ಪಾಯಿಂಟ್ ಗುರುತಿಸಿ ಕ್ಯಾಮೆರಾ ಟ್ಯಾಪ್ ಮೂಲಕ ಗಣತಿ ಮಾಡಲಾಗಿತ್ತು. ಮಲೆ ಮಹದೇಶ್ವರ ಬೆಟ್ಟ ರಾಜ್ಯದ ನೂತನ ಹುಲಿ ಸಂರಕ್ಷಿತ ಪ್ರದೇಶವೆನಿಸಿದೆ. 920 ಚ.ಕಿ.ಮೀ ವಿಸ್ತಾರದಲ್ಲಿ ಬೆಟ್ಟ ಗುಡ್ಡಗಳಿಂದ ಕೂಡಿದ ಅರಣ್ಯ ಪ್ರದೇಶವಿದೆ. 7 ರೇಂಜ್, 3 ಉಪವಿಭಾಗಗಳಲ್ಲಿ ಅಂದಾಜು 30 ಹುಲಿಗಳಿವೆ. ಹುಲಿ ಗಣತಿ ವೇಳೆ 20 ಹುಲಿಗಳು ಕಂಡು ಬಂದಿವೆ. ನಾಗರಾಹೊಳೆಗಿಂತ ಶೇ.20 ರಷ್ಟು ಹೆಚ್ಚಿನ ಕಾಡು ಕಂಡು ಬಂದಿದೆ. ಹುಲಿ ಕಂಡು ಬಂದ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಸತ್ಯಮಂಗಲ, ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಮಲೆ ಮಹದೇಶ್ವರ ಬೆಟ್ಟದ ಕಾಡು ಇದೆ.
ಮೈಸೂರು, ಕೊಡಗು ಜಿಲ್ಲೆಗಳಿಗೆ ಹೊಂದಿಕೊಂಡಂತೆ ಇರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 125ಕ್ಕೂ ಹೆಚ್ಚು ಹುಲಿಗಳಿವೆ. 200ಚ.ಕಿ.ಮೀ ಬಫರ್ ಝೋನ್ ನೊಂದಿದೆ 834 ಚ.ಕಿ.ಮೀ ವಿಸ್ತಾರದ ಈ ಅಭಯಾರಣ್ಯವನ್ನ ಹೊಂದಿದೆ.
ಒಟ್ಟಾರೆ ಹಳೇ ಮೈಸೂರು ಪ್ರಾಂತ್ಯ ಹುಲಿಗಳನ್ನ ಫೋಷಣೆ ಮಾಡುವುದರಲ್ಲಿ ಎಲ್ಲ ರಾಜ್ಯಗಳಿಗೆ ಮಾದರಿಯಾಗಿದೆ. ಇಲ್ಲಿನ ವಾತಾವರಣ ಹುಲಿಗಳಿಗಷ್ಟೇ ಅಲ್ಲ ಎಲ್ಲಾ ಪ್ರಾಣಿಗಳಿಗೆ ಹೇಳಿ ಮಾಡಿಸಿದ ಅರಣ್ಯ ಪ್ರದೇಶವಾಗಿದೆ.