ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಳಗಾವಿ, ಮಡಿಕೇರಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಅಲ್ಲದೆ ಬಿತ್ತನೆ ಮಾಡಿದ್ದ ರೈತರ ಮೊಗದಲ್ಲಿ ಸಹ ಮಂದಹಾಸ ಮೂಡಿದೆ. ಬೆಳಗಾವಿ ಜನತೆ ಬಿಸಿಲಿನಿಂದ ಕಂಗೆಟ್ಟಿದ್ದರು. ಇಂದು ಬೆಳಗಾವಿ ನಗರದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆ ಸುರಿದಿದ್ದು, ಇಳಿ ಸಂಜೆಯಲ್ಲಿ ಮಳೆಯಾಗಿದ್ದರಿಂದ ನಗರವಾಸಿಗಳು ಸಂತಸದಲ್ಲಿ ತೇಲಾಡಿದರು. ಕಳೆದೊಂದು ವಾರದಿಂದ ಸುಡುಬಿಸಿಲಿಗೆ ಹೈರಾಣಾಗಿದ್ದ ಜನತೆಗೆ ಇಂದು ಸುರಿದ ಮಳೆಯಿಂದ ತಂಪು ವಾತಾವರಣ ನಿರ್ಮಾಣವಾಗಿದೆ.
ಕೊಡಗು ಜಿಲ್ಲೆಯ ಹಲವೆಡೆ ಸಹ ಧಾರಾಕಾರ ಮಳೆಯಾಗಿದ್ದು, ಮಡಿಕೇರಿ ತಾಲೂಕಿನ ನಾಪೋಕ್ಲು ಸುತ್ತಮುತ್ತ ಭಾರೀ ಮಳೆಯಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಎಡಬಿಡದೆ ಮಳೆ ಸುರಿದಿದೆ. ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಉತ್ತಮ ಮಳೆಯಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ.
ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಸುಡು ಬಿಸಿಲ ನಡುವೆ ಮಳೆರಾಯ ತಂಪೆರೆದಿದ್ದಾನೆ ಎಂದು ಜನ ಸಂತಸಗೊಂಡಿದ್ದಾರೆ. ಉಡುಪಿ, ಬ್ರಹ್ಮಾವರ ಹಾಗೂ ಕಾರ್ಕಳ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಕಾರ್ಕಳ ತಾಲೂಕಿನ ಅಜೆಕಾರು, ಮುನಿಯಾಲಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಉಡುಪಿ ನಗರದಲ್ಲೂ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ.