ಬೆಂಗಳೂರು: ಇಂದು ಸಹ ರಾಜ್ಯದ ಹಲವೆಡೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಮಂಗಳೂರಿನಲ್ಲಿ ಕಾಂಪೌಂಡ್ ಗೋಡೆ ಕುಸಿದು ಕಾರ್ಮಿಕ ಮೃತಪಟ್ಟಿದದ್ದಾರೆ. ಅಲ್ಲದೆ ಕೊಡಗು ಹಾಗೂ ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
Advertisement
ಮಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾಂಪೌಂಡ್ ಗೋಡೆ ಕುಸಿದಿದ್ದು, ವ್ಯಕ್ತಿಯೋಬ್ಬರು ಮಣ್ಣಿನಡಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ. ಮಂಗಳೂರಿನ ಬಂಗ್ರಕೂಳೂರು ಬಳಿ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ನೀರುಮಾರ್ಗ ನಿವಾಸಿ 38 ವರ್ಷದ ಉಮೇಶ್ ಮೃತಪಟ್ಟ ದುರ್ದೈವಿ. ಮನೆಯ ತೋಟದ ಕೆಲಸ ಮಾಡುತ್ತಿದ್ದ ವೇಳೆ ಪಕ್ಕದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಈ ವೇಳೆ ಅಲ್ಲೇ ಇದ್ದ ಮೂವರು ಕಾರ್ಮಿಕರು ಓಡಿ ಪಾರಾಗಿದ್ದಾರೆ. ಉಮೇಶ್ ಅವರು ಅಲ್ಲೇ ತೆಗೆದಿದ್ದ ಶೌಚಾಲಯ ಗುಂಡಿಗೆ ಬಿದ್ದಿದ್ದು, ಇದೇ ವೇಳೆ ಅವರ ಮೇಲೆ ಕುಸಿದ ಮಣ್ಣು ಬಿದ್ದಿದೆ. ಸುಮಾರು ಮೂರು ಗಂಟೆಯ ಕಾರ್ಯಾಚರಣೆ ಬಳಿಕ ಉಮೇಶ್ ಅವರ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ರಾಯಚೂರುನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ರಾತ್ರಿ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಜನತೆ ಇಡೀ ರಾತ್ರಿ ನೀರಿನಲ್ಲೇ ಜೀವನ ಕಳೆದಿದ್ದಾರೆ. ಅಲ್ಲದೆ ರಾಯಚೂರು ನಗರದ ಹಲವು ಕಾಲೋನಿಗಳ ಮನೆಗಳಿಗೆ ನೀರು ನುಗ್ಗಿದ್ದು, ನೀರು ಹೊರಹಾಕಲಾಗದೆ ಮಕ್ಕಳು, ವಯೋವೃದ್ಧರು ರಾತ್ರಿ ಇಡೀ ಪರದಾಡಿದ್ದಾರೆ. ತಗ್ಗು ಪ್ರದೇಶದಲ್ಲಿದ್ದ ಜೆಸ್ಕಾಂ ಉಗ್ರಾಣ ಸಂಪೂರ್ಣ ಜಲಾವೃತವಾಗಿದ್ದು, ಲಕ್ಷಾಂತರ ಮೌಲ್ಯದ ವಿದ್ಯುತ್ ಪರಿವರ್ತಕಗಳು ನೀರುಪಾಲಾಗಿವೆ.
Advertisement
ಉಡುಪಿ ಕೊಡಗಿನಲ್ಲಿ ರೆಡ್ ಅಲರ್ಟ್
ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ಬೆಳಗ್ಗೆ 8.30ರ ವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ ನಗರ, ಹೊರವಲಯದಲ್ಲಿ ಮಧ್ಯಾಹ್ನದಿಂದ ಭಾರೀ ಮಳೆ ಸುರಿದಿದೆ. ನದಿ, ಸಮುದ್ರ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ರಾತ್ರಿ ವೇಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕೊಡಗಿನಲ್ಲಿ ಸಹ ಭಾರೀ ಮಳೆ ಸುರಿಯುತ್ತಿದ್ದು, ಶನಿವಾರ ಮತ್ತು ಭಾನುವಾರ ಎರಡು ದಿನ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಲಾಗಿದೆ. 21ರ ಬೆಳಗ್ಗೆ 8.30 ವರೆಗೆ ರೆಡ್ ಅಲರ್ಟ್ ಇರಲಿದೆ. 204 ಮಿಲಿ ಮೀಟರ್ ಗಿಂತಲೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 21 ರಿಂದ 22 ಬೆಳಗ್ಗೆ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ವಿವಿಧ ನಗರಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಕಲಬುರಗಿಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.