– ಹಸಿರು ಟವಲ್ ಹಾಕಿ, ಆಟವಾಡಿ ರೈತರಿಗೆ ಅವಮಾನ ಮಾಡಬೇಡಿ
ಮೈಸೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿರುಗಿ ಬಿದ್ದಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ರಾಜ್ಯದ ಜನ ಕಷ್ಟ ಅನುಭವಿಸಲು ಕೋಡಿಹಳ್ಳಿಯೇ ಕಾರಣ. ನೀವು ಸಾರಿಗೆ ನೌಕರರ ಪರ ಹೋರಾಟ ಮಾಡಿ. ಆದರೆ ಹಸಿರು ಟವಲ್ ಇಳಿಸಿ ಹೋರಾಟ ಮಾಡಿ. ಸುಮ್ಮನೆ ಹಸಿರು ಟವಲ್ ಹಾಕಿಕೊಂಡು ರೈತರಿಗೆ ಅವಮಾನ ಮಾಡಬೇಡಿ. ನಿಮ್ಮಿಂದ ರೈತ ಮುಖಂಡರು, ರೈತ ಸಂಘಟನೆಗಳ ಬಗ್ಗೆ ಜನರಿಗೆ ಕೆಟ್ಟ ಅಭಿಪ್ರಾಯ ಮೂಡಿದೆ ಎಂದು ಟೀಕಿಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಅವರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಕೊಡಬೇಕಿತ್ತು. ಅದನ್ನು ಬಿಟ್ಟು ಸಾರಿಗೆ ನೌಕರರ ಜೊತೆ ಮುಷ್ಕರ ನಡೆಸಿ, ಅದನ್ನೂ ಹಳ್ಳ ಹಿಡಿಸಿದರು. ಅಲ್ಲದೆ ಇದರಿಂದ ರೈತ ಸಂಘದ ವರ್ಚಸ್ಸು ಕುಂದಿದೆ. ಗೌರವ ಕಡಿಮೆಯಾಗಿದೆ. ಹಸಿರು ಟವಲ್ ಹಾಕಿಕೊಂಡು ಆಟವಾಡಬೇಡಿ. ನಿಮಗೆ ಬದ್ಧತೆ ಇದ್ದರೆ ರೈತರ ಬಗ್ಗೆ ಆ ಕಾಳಜಿ ತೋರಿಸಿ. ಪ್ರಚಾರಕ್ಕಾಗಿ, ಬೇರೆ ಸಂಘಟನೆಗಳಲ್ಲಿ ಒಡಕು ಉಂಟುಮಾಡಲು ಈ ರೀತಿ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಮಡಿದ್ದಾರೆ.
ರಾಜ್ಯದ ಜನ ನಾಲ್ಕು ದಿನಗಳಿಂದ ಸಂಕಷ್ಟ ಅನುಭವಿಸುವುದಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಅವರ ತಪ್ಪು ನಿರ್ಧಾರಗಳೇ ಕಾರಣ. ಕೋಡಿಹಳ್ಳಿಗೆ ಸಮಸ್ಯೆಯ ಅರಿವಿಲ್ಲ ಹಾಗಾಗಿ ಅದಕ್ಕೆ ಪರಿಹಾರವೂ ಗೊತ್ತಿಲ್ಲ. ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸಿರೋದೆ ಕೋಡಿಹಳ್ಳಿ ಚಂದ್ರಶೇಖರ್. ಭಾನುವಾರ ಮುಕ್ತಾಯವಾಗಿದ್ದ ಮುಷ್ಕರವನ್ನು ಮುಂದುವರೆಸಲು ಚಿತಾವಣೆ ಮಾಡಿದ್ದೇ ಕೋಡಿಹಳ್ಳಿ. ಸಾರಿಗೆ ನೌಕರರೇ ನಿಮ್ಮ ಬಗ್ಗೆ ಜನರಿಗೆ ಸಹಾನುಭೂತಿ ಇದೆ. ಕೋಡಿಹಳ್ಳಿ ಮಾತು ಕಟ್ಟಿಕೊಂಡು ಹೋದರೆ ಅವರ ಸಂಘಟಯೇ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ.