ಚಿತ್ರದುರ್ಗ: ಮಹಿಳೆ ಮನಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ನಿಲ್ಲಬಲ್ಲ, ಮೇರು ವ್ಯಕ್ತಿತ್ವ ಎನಿಸಿದ್ದ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ಗ್ರಾಮದ ಕೃಷಿಕ ವೀರಭದ್ರಪ್ಪನವರ ಪತ್ನಿ, ರಾಜ್ಯದಲ್ಲಿ ಮೊದಲು ಟ್ರ್ಯಾಕ್ಟರ್ ಲೈಸೆನ್ಸ್ ಪಡೆದಿದ್ದ ಮಹಿಳೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸುಮಂಗಲಮ್ಮ ವೀರಭದ್ರಪ್ಪ(69) ವಿಧಿವಶರಾಗಿದ್ದಾರೆ.
ಹೃದಯಾಘಾತದಿಂದ ಇಂದು ಬೆಳಗಿನ ಜಾವ 3.30ಕ್ಕೆ ಸುಮಂಗಲಮ್ಮ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಅವರ ಕರ್ಮ ಭೂಮಿಯಲ್ಲೆ ಇಂದು ನೆರವೇರಿದ್ದು, ಮೃತರ ನಿಧನಕ್ಕೆ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಕೃಷಿಕ ಬಂಧುಗಳು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ರೈತ ಮಹಿಳೆ ಸುಮಂಗಲಮ್ಮಗೆ ರಾಜ್ಯೋತ್ಸವ ಪ್ರಶಸ್ತಿ- ಸಚಿವ ರಾಮುಲು ಅಭಿನಂದನೆ
Advertisement
Advertisement
ಮಕ್ಕಳಿಗೆ ಶಿಕ್ಷಣ ಕೊಡಿಸಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವಂತೆ ಬೆಳೆಸಿದ್ದಲ್ಲದೆ, ತಾವು ನಂಬಿದ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ದಣಿವರಿಯದೆ ದುಡಿಮೆ ಮಾಡುತ್ತಿದ್ದ ಸುಮಂಗಲಮ್ಮ, ಟ್ರ್ಯಾಕ್ಟರ್ ಡ್ರೈವಿಂಗ್ ಲೈಸೆನ್ಸ್ ಪಡೆದ ರಾಜ್ಯದ ಮೊದಲ ಮಹಿಳೆಯಾಗಿ, ಜಮೀನಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರು.
Advertisement
Advertisement
ದಂಪತಿಯ ಅವಿರತ, ದಣಿವರಿಯದ ದುಡಿಮೆಯಿಂದ ಅವರ ಬರಡಾಗಿದ್ದ ಕೃಷಿ ಭೂಮಿ ಇಂದು ನಂದನವನವಾಗಿದೆ. ಅನೇಕ ಕೃಷಿಕರು, ವಿಶ್ವವಿದ್ಯಾಲಯದವರು ಇವರ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುವ ಮಾಹಿತಿ ಕೇಂದ್ರ ಎನಿಸಿದೆ. ಇವರ ಕೃಷಿ ಕ್ಷೇತ್ರದಲ್ಲಿ ಸುಮಾರು 50 ಜನ ಕೆಲಸದವರು ಇರುತ್ತಾರೆ, ಅವರಿಗೆಲ್ಲ ನಿತ್ಯ ದಾಸೋಹದ ಜೊತೆಗೆ ಭೇಟಿ ನೀಡುವ ಎಲ್ಲರಿಗೂ ಊಟ, ಉಪಚಾರವನ್ನು ನೀಡಲಾಗುತ್ತದೆ.
ಕೇವಲ ಕೃಷಿಯಷ್ಟೇ ಅಲ್ಲದೆ ಸಾಮಾಜಿಕ ಸಂಘಟನೆಗಳಲ್ಲಿ ಭಾಗಿಯಾಗಿ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದ್ದ ಈ ದಿಟ್ಟ ಮಹಿಳೆ, ಸಂಘ ಪರಿವಾರದಲ್ಲಿ ಭಾರತೀಯ ಕಿಸಾನ್ ಸಂಘದ ಅಖಿಲ ಭಾರತ ತಂಡದಲ್ಲಿಯೂ ಸಕ್ರಿಯ ಸದಸ್ಯರಾಗಿದ್ದರು. ಶ್ರೀಮಂತ ಮನೆತನದವರಾಗಿದ್ದರೂ ಉಡುಗೆ, ತೊಡುಗೆ, ಸಮಾಜ ಕಾರ್ಯದಲ್ಲಿ ಮಾತ್ರ ಸಾಮಾನ್ಯರಲ್ಲಿ ಸಾಮಾನ್ಯರಂತೆಯೇ ಜೀವನ ಸಾಗಿಸಿದವರು. ಇವರ ಕಾರ್ಯ ಗಮನಿಸಿದ ರಾಜ್ಯ ಸರ್ಕಾರ, ಕೃಷಿ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ 2020-21ನೇ ಸಾಲಿನ ರಾಜ್ಯೋತ್ಸವವ ಪ್ರಶಸ್ತಿ ನೀಡಿ ಗೌರವಿಸಿತ್ತು.