ರಾಜ್ಯದಲ್ಲಿ 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ: ಸಚಿವ ಸುಧಾಕರ್

Public TV
2 Min Read
Sudhakar 4

– ಲಸಿಕೆ ನೀಡಲು 9,807 ಅನುಭವಿ ವ್ಯಾಕ್ಸಿನೇಟರ್ ಸಿಬ್ಬಂದಿ
– ರಾಜ್ಯಾದ್ಯಂತ 28,427 ಲಸಿಕಾ ಕೇಂದ್ರಗಳು

ಬೆಂಗಳೂರು: ಇತ್ತೀಚೆಗಷ್ಟೇ ಕೊರೊನಾ ಲಸಿಕೆಗೆ ಅನುಮತಿ ಸಿಕ್ಕಿದೆ. ಅಲ್ಲದೆ ಜನವರಿ 13ರಿಂದ ಲಸಿಕೆ ವಿತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಹ ತಿಳಿಸಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಸಹ ಸಿದ್ಧತೆ ಮಾಡಲಾಗಿದ್ದು, ಒಟ್ಟು 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ತಿಳಿಸಿರುವ ಅವರು, ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದ್ದು, ರಾಜ್ಯ ಸರ್ಕಾರ ಸುವ್ಯವಸ್ಥಿತ ಲಸಿಕೆ ವಿತರಣೆಗೆ ಸಕಲ ಸಿದ್ಧತೆ ನಡೆಸಿದೆ. ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಿದ್ದು, 2,73,211 ಸರ್ಕಾರಿ ಹಾಗೂ 3,57,313 ಖಾಸಗಿ ಸೇರಿ ಒಟ್ಟು 6,30,524 ಅರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ ಎಂದು ವಿವರಿಸಿದ್ದಾರೆ.

ಲಸಿಕೆ ನೀಡಲು ತರಬೇತಿ ಪಡೆದ 9,807 ಅನುಭವಿ ವ್ಯಾಕ್ಸಿನೇಟರ್ ಸಿಬ್ಬಂದಿ ಮತ್ತು ರಾಜ್ಯಾದ್ಯಂತ 28,427 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಕೇಂದ್ರಗಳನ್ನು ಗುರುತಿಸಲಾಗುವುದು. ಈ ಎಲ್ಲ ದತ್ತಾಂಶವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಕೊವಿನ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಕ್ಕೆ ಅವಶ್ಯಕತೆ ಇರುವ ಹೆಚ್ಚಿನ ಮೂಲಭೂತ ಸೌಕರ್ಯವನ್ನು ಕೇಂದ್ರ ಸರ್ಕಾರ ಪೂರೈಸುತ್ತಿದ್ದು, ಈವರೆಗೂ 64 ಬೃಹತ್ ಐಸ್ ಲೈನ್ಡ್ ರೆಫ್ರಿಜರೇಟರ್ (ILR), 24 ಲಕ್ಷ ಸಿರಿಂಜುಗಳು ರಾಜ್ಯಕ್ಕೆ ಬಂದಿವೆ. ಎಲ್ಲವನ್ನೂ ಜಿಲ್ಲೆಗಳಿಗೆ ರವಾನಿಸಲಾಗಿದೆ. ಇನ್ನುಳಿದ 31 ಲಕ್ಷ ಸಿರಿಂಜುಗಳು ಸೇರಿದಂತೆ ಹೆಚ್ಚುವರಿ ಉಪಕರಣಗಳು ಶೀಘ್ರದಲ್ಲೇ ತಲುಪಲಿವೆ ಎಂದು ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *