– ಖಾಸಗಿ ಶಾಲೆಗೆ ಟಾಟಾ, ಸರ್ಕಾರಿ ಸ್ಕೂಲಲ್ಲಿ ಪಾಠ
ಬೆಂಗಳೂರು: ರಾಜ್ಯದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಇದು ಹೊಸ ಫ್ಯಾಷನ್, ಹೊಸ ಟೆಕ್ನಾಲಜಿ ಟ್ರೆಂಡ್ ಅಲ್ಲ. ನೂತನ ಎಜುಕೇಷನ್ ಟ್ರೆಂಡ್ ಆರಂಭವಾಗಿದೆ. ಇದೇ ಮೊದಲಿಗೆ ಖಾಸಗಿ ಶಾಲೆಗಳು ಡಿಮ್ಯಾಂಡ್ ಇಳಿಸಿಕೊಂಡಿದ್ದು, ಸರ್ಕಾರಿ ಶಾಲೆಗಳಿಗೆ ಸಖತ್ ಬೇಡಿಕೆ ಶುರುವಾಗಿದೆ.
ಹೌದು..ಗ್ರಾಮೀಣ ಅಲ್ಲ ಬೆಂಗಳೂರಲ್ಲೂ ಖಾಸಗಿ ಶಾಲೆಗಳಿಗೆ ಡಿಮ್ಯಾಂಡ್ ಕುಗ್ಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ಶಾಲೆಗೆ ಹೆಚ್ಚಾಗಿ ಮಕ್ಕಳು ಆಗಮಿಸುತ್ತಿದ್ದಾರೆ. ತಾಲೂಕು, ಹೋಬಳಿ, ಗ್ರಾಮೀಣ ಭಾಗದಲ್ಲಿಯೂ ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗೆ ಸೇರಿಕೊಳ್ಳುತ್ತಿದ್ದಾರೆ. ಸರ್ಕಾರಿ ಶಾಲೆ ಅಂದರೆ ಸಾಕು ಮೂಗು ಮುರಿಯುತ್ತಿದ್ದವರೇ ಹೆಚ್ಚು. ಅಲ್ಲದೇ ಸರ್ಕಾರಿ ಶಾಲೆಗಂತೂ ನಮ್ಮ ಮಕ್ಕಳನ್ನು ಕಳಿಸಲ್ಲ ಎನ್ನುತ್ತಿದ್ದರು. ಆದರೆ ಈಗ ಪೋಷಕರು ತಮ್ಮ ಅಭಿಪ್ರಾಯವನ್ನೇ ಬದಲಾಯಿಸಿಕೊಂಡಿದ್ದಾರೆ.
ಮಹಾಮಾರಿ ಕೊರೊನಾ ಪರಿಣಾಮದಿಂದ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಾಗಿದೆ. ಇದರಿಂದ ಖಾಸಗಿ ಶಾಲೆಯ ಫೀಸ್ ಕಟ್ಟಲಾಗದೇ ಪೋಷಕರ ಪರದಾಡುತ್ತಿದ್ದಾರೆ. ಜೊತೆಗೆ ಅನ್‍ಲೈನ್ ಕ್ಲಾಸ್ ಫೀ ಕಟ್ಟಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ದೂರದೂರಿಗೆ ಮಕ್ಕಳನ್ನು ಬಸ್ಸಿನಲ್ಲಿ ಕಳಿಸಲು ಪೋಷಕರು ಭಯ ಪಡುತ್ತಿದ್ದಾರೆ. ಇದರಿಂದ ಪೋಷಕರು ಸರ್ಕಾರಿ ಶಾಲೆಗಳ ಕಡೆ ಮುಖ ಮಾಡುತ್ತಿದ್ದು, ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 914 ಸರ್ಕಾರಿ ಶಾಲೆ ಇವೆ. 914 ಸರ್ಕಾರಿ ಶಾಲೆ ಪೈಕಿ 350 ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಿದೆ. ಖಾಸಗಿ ಶಾಲೆ ಬಿಡಿಸಿ ಸರ್ಕಾರಿ ಶಾಲೆಗಳಿಗೆ ಪೋಷಕರು ಮೊರೆ ಹೋಗುತ್ತಿದ್ದಾರೆ. ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಅಡ್ಮಿಷನ್ ಹೆಚ್ಚಳವಾಗುವ ಮೂಲಕ ಸರ್ಕಾರಿ ಶಾಲೆಗಳಿಗೆ ಈಗ ಡಿಮ್ಯಾಂಡ ಶುರುವಾಗಿದೆ. ಜೊತೆಗೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಟಿಸಿಗಳಿಗೆ ಡಿಮ್ಯಾಂಡ್ ಶುರುವಾಗಿದೆ.
ಹಾವೇರಿ ಜಿಲ್ಲೆಯಲ್ಲೂ ಸರ್ಕಾರಿ ಶಾಲೆಗಳಿಗೆ ಡಿಮ್ಯಾಂಡ್ ಶುರುವಾಗಿದೆ. ಸಾವಿರಾರು ಮಕ್ಕಳು ಖಾಸಗಿ ಶಾಲೆ ತೊರೆದಿದ್ದು, ಸರ್ಕಾರಿ ಶಾಲೆಗೆ ಸೇರಿಕೊಂಡಿದ್ದಾರೆ. 1ರಿಂದ 7ನೇ ಕ್ಲಾಸ್ ತರಗತಿಗಳಿಗೆ ದಾಖಲಾತಿ ಹೆಚ್ಚಳವಾಗಿದೆ. ನಮ್ಮ ಕೈಯಲ್ಲಿ ಖಾಸಗಿ ಶಾಲೆಗೆ ಶುಲ್ಕ ಕಟ್ಟಲು ಹಣ ಇಲ್ಲ. ಸಣ್ಣ ಮಕ್ಕಳನ್ನ ವಾಹನದಲ್ಲಿ ಕಳಿಸಲು ಭಯ ಆಗುತ್ತಿದೆ. ಸರ್ಕಾರಿ ಶಾಲಾ ಶಿಕ್ಷಕರಿಂದ ಉಚಿತ ಮತ್ತು ಮನೆ ಪಾಠ ಇದೆ. ಹೀಗಾಗಿ ನಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಕಳುಹಿಸುತ್ತೀವಿ ಎಂದು ಪೋಷಕರ ಹೇಳುತ್ತಿದ್ದಾರೆ.
‘ಸರ್ಕಾರಿ’ ಶಾಲೆಗಳ ಒಲವಿಗೆ ಕಾರಣಗಳು
* ಡೊನೇಷನ್ ಹಾವಳಿ ತಪ್ಪಿಸಿಕೊಳ್ಳಲು ಪರ್ಯಾಯ ಮಾರ್ಗ
* ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಬಿಸಿಯೂಟ ಸೇರಿ ಹಲವು ಸೌಲಭ್ಯ
* ಕೊರೊನಾ ಭೀತಿ ದೂರಾಗಿಸಲು ಹತ್ತಿರದ ಸರ್ಕಾರಿ ಶಾಲೆಗೆ ಆದ್ಯತೆ
* ಖಾಸಗಿ ಶಾಲಾ ವಾಹನ ಸೌಕರ್ಯಕ್ಕೆ ಹೆಚ್ಚುವರಿ ಶುಲ್ಕ ತೆರಬೇಕು
* ಕೊರೊನಾದಿಂದಾಗಿ ಹಳ್ಳಿಗಳಿಗೆ ವಲಸೆ ಹೋದವರಿಂದ ಸರ್ಕಾರಿ ಶಾಲೆಗಳ ಮೊರೆ
* ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುವ ಬಗ್ಗೆ ಮನವರಿಕೆ
* ಆನ್‍ಲೈನ್ ಶಿಕ್ಷಣದ ಬಗ್ಗೆ ನಿರಾಸಕ್ತಿ, ವಿದ್ಯಾಗಮ ಯೋಜನೆ ಬಗ್ಗೆ ಕುತೂಹಲ