ಬೆಂಗಳೂರು: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯದಲ್ಲಿ ಗೋಹತ್ಯೆ ತಡೆ ಕಾಯ್ದೆ ಸೋಮವಾರದಿಂದಲೇ ಜಾರಿಗೆ ಬರಲಿದೆ. ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟ ಸಂಪೂರ್ಣ ನಿಷೇಧವಾಗುತ್ತದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆ ಹೊರಡಿಸಿರೋ ಸಚಿವರು, ಶೀಘ್ರವೇ ನಿಯಮಾವಳಿಗಳನ್ನು ಬಿಡುಗಡೆ ಮಾಡ್ತೇವೆ. ರೈತರು, ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ಗೊಂದಲಕ್ಕೀಡಾಗಬಾರದು. ಗೋವುಗಳ ಅಕ್ರಮ ಸಾಗಾಟ ಮತ್ತು ವಧೆ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು. ಸಾರ್ವಜನಿಕರು ಉದ್ವೇಗದಲ್ಲಿ ಕಾನೂನು ಕೈಗೆತ್ತಿಕೊಳ್ಳಬಾರದು. ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ, ಆರ್‌ಟಿಐ ವ್ಯಾಪಿಗೆ ಬೆಂಗಳೂರು ಟರ್ಫ್ ಕ್ಲಬ್ ಬರುತ್ತೆ ಅಂತ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಬೆಂಗಳೂರು ಟರ್ಫ್ ಕ್ಲಬ್, ಲೇಡಿಸ್ ಕ್ಲಬ್, ಮೈಸೂರು ರೇಸ್ ಕ್ಲಬ್, ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಸಂಸ್ಥೆಗಳ ಅರ್ಜಿ ವಜಾಗೊಳಿಸಿದ ಕೋರ್ಟ್, ಸರ್ಕಾರ ರಿಯಾಯಿತಿ ದರದಲ್ಲಿ ಭೂಮಿ ಗುತ್ತಿಗೆ ನೀಡಿದೆ. ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ಕೋಟ್ಯಾಂತರ ರಿಯಾಯಿತಿ ಆಗಿದೆ. ಭೂಮಿ ಗುತ್ತಿಗೆ ಪಡೆದವರು ಜನರಿಗೆ ಉತ್ತರದಾಯಿಯಾಗುತ್ತಾರೆ. ಹೀಗಾಗಿ ಈ ಸಂಸ್ಥೆಗಳು ಸಾರ್ವಜನಿಕ ಪ್ರಾಧಿಕಾರಗಳು. ಆರ್ ಟಿ ಐ ಕಾಯ್ದೆಯಡಿ ಮಾಹಿತಿ ಪಡೆಯಬಹುದು ಎಂದಿದೆ.