ವಿಜಯಪುರ: ಸಚಿವ ಸಂಪುಟದ ಗಮನಕ್ಕೆ ತರದೇ ಅನುದಾನ ಕೊಡುವುದಾದರೆ ಸಚಿವರು ಯಾಕೆ ಬೇಕು ಎಂದು ಪ್ರಶ್ನಿಸುವ ಮೂಲಕ ಸಚಿವ ಈಶ್ವರಪ್ಪನವರ ಪರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್ ಮಾಡಿದ್ದಾರೆ.
ರಾಜ್ಯದಲ್ಲಿ ಯಾವ ಸಚಿವರಿಗೂ ಸ್ವತಂತ್ರ್ಯ ಅಧಿಕಾರ ಇಲ್ಲ. ವಿಜಯೇಂದ್ರ ಮುಂದೆ ಇವರೆಲ್ಲ ನಿಂತು ಸರ್ ಎಂದು ಮಾತನಾಡಬೇಕು. ಕುಳಿತು ಕೊಳ್ಳಲು ಕುರ್ಚಿ ಇರುವುದಿಲ್ಲ. ಯಡಿಯೂರಪ್ಪನವರಿಗೆ ವಯೋ ಸಹಜ ಮರೆವು ಜಾಸ್ತಿ ಆಗಿದೆ. ಲಿಂಗಾಯತ ನಾಯಕರನ್ನು ಇವರು ಮುಗಿಸಿದರು. ಈಗ ಹಿಂದುಳಿದ ನಾಯಕರನ್ನು ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಸಿಎಂ ಯಡ್ಡಿಯೂರಪ್ಪ ವಿರುದ್ಧ ದೂರಿದರು.
ಸಂಪುಟದ ಗಮನಕ್ಕೆ ತರದೇ ಅನುದಾನ ಕೊಡುವುದು ಆದರೆ ಸಚಿವರು ಯಾಕೆ ಬೇಕು? ನಾಲ್ಕು ಜನ ಹೊಗಳುಬಟರಿಗೆ ಆಸೆ ಹಚ್ಚಿದರಿಂದ ಇವರೇ ತಂದೆ, ತಾಯಿ ಎಂದು ಮಾತನಾಡುತ್ತಿದ್ದಾರೆ. ಗುಲಾಮ ಗಿರಿ ಬೇಡ ಅಂತಲೇ ನಾನು ಮಂತ್ರಿಯಾಗಿಲ್ಲ. ವಿಜಯೇಂದ್ರ ಯಡಿಯೂರಪ್ಪನವರ ಮುಂದೆ ಕೈ ಒಡ್ಡುವ ಸಲುವಾಗಿ ನಾನು ಮಂತ್ರಿಯಾಗಿಲ್ಲ. ಅದನ್ನು ನಾನು ಇಂದು ಹೇಳುತ್ತಿದ್ದೇನೆ ಎಂದರು.
ಎಲ್ಲ ಇಲಾಖೆಯ ಸಚಿವನಾಗಿ ವಿಜಯೇಂದ್ರ ಅವರನ್ನು ಮಾಡಿ ಉಳಿದವರೆಲ್ಲ ಶಾಸಕರಾಗಿ ಉಳಿಯಲಿ. ನಾನು ಅನಂತಕುಮಾರ್, ಈಶ್ವರಪ್ಪ ಹೋರಾಟ ಮಾಡಿ ಪಾರ್ಟಿ ಕಟ್ಟಿದ್ದೇವೆ. ನರೇಂದ್ರ ಮೋದಿ ಅವರ ಪ್ರಾಮಾಣಿಕತೆ ನೋಡಿ ಇಂದು ಜನ ಮತ ಹಾಕುತ್ತಿದ್ದಾರೆ. ವಿಜಯೇಂದ್ರ ನೇತೃತ್ವದಲ್ಲಿ ಉಪಚುನಾವಣೆ ಆಗುವುದಾದರೆ ಪಕ್ಷ ಏಕೆ ಬೇಕು ಎಂದು ವಾಗ್ದಾಳಿ ನಡೆಸಿದರು.
ಈಶ್ವರಪ್ಪ ಮೂಲ ಬಿಜೆಪಿಗರು. ನಾನು ಯಡ್ಡಿಯೂರಪ್ಪ ಒಂದು ಬಾರಿ ಬಿಜೆಪಿಯಿಂದ ಹೊರ ಹೋಗಿ ಬಂದಿದ್ದೇವೆ. ನಿನ್ನೆ ಮೊನ್ನೆ ಬಂದವರು ಈಶ್ವರಪ್ಪ ಬಗ್ಗೆ ಕಮೆಂಟ್ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವ ಈಶ್ವರಪ್ಪ ಪರ ಯತ್ನಾಳ್ ಬ್ಯಾಟ್ ಬೀಸಿದರು.
ಎಲ್ಲ ಕ್ಯಾಬಿನೆಟ್ ಮಂತ್ರಿಗಳಿಗೆ ಅಧಿಕಾರ ಇಲ್ಲ ಅಂದರೆ ಏನು ಮಾಡುತ್ತಾರೆ. ಜಾರಕಿಹೊಳೆಯವರನ್ನು ಏನೋ ಒಂದರಲ್ಲಿ ಸಿಕ್ಕರು ಎಂದು ಅವರನ್ನು ಬಿಟ್ಟರು. ಗ್ರಾಮಿಣಾಭಿವೃದ್ಧಿ ಕೂಡ ದೊಡ್ಡ ಇಲಾಖೆ ಇದರಲ್ಲೂ ಕಮೀಷನ್ ನಮಗೆ ಬರಲಿ ಎಂದು ವಿಜಯೇಂದ್ರ ಅಂತಿದ್ದಾರೆ ಎಂದು ದೂರಿದರು.
ಸಿಎಂ ಬೀಗ ಮರಿಸ್ವಾಮಿ ಎಂಬಾತ ಬೆಂಗಳೂರು ನಗರ ಜಿ.ಪಂ ಅಧ್ಯಕ್ಷನಾದ್ದಾನೆ. 200 ಕೋಟಿ ರೂ. ಗೆ ಅವರು ಮನವಿಗೆ ಕೊಡುತ್ತಾರೆ. ಆಗ 65 ಕೋಟಿ ರೂ. ದಿಢೀರನೆ ಬಿಡುಗಡೆ ಮಾಡಲು ಸಿಎಂ ಬರಿತಾರೆ. ಹೀಗಾದರೆ ಸಚಿವರು ಯಾಕೆ ಬೇಕು? ಕ್ಯಾಬಿನೇಟ್ ಯಾಕೆ ಬೇಕು ಎಂದು ಪ್ರಶ್ನಿಸಿದರು.
ಎಲ್ಲ ವಿಜಯೇಂದ್ರನನ್ನೇ ಮಾಡಿ ಬಿಡಿ. ನೀವು ಸಿಎಂ ಆಗಿ ಇರಿ, ಉಳಿದ ಎಲ್ಲ ಖಾತೆಗಳನ್ನ ವಿಜಯೇಂದ್ರಗೆ ಕೊಟ್ಟು ಬಿಡಿ. ಸಿಎಂ ಅಂದ್ರೆ ಅವರು ಕೂಡ ಕ್ಯಾಬಿನೆಟ್ ದರ್ಜೆ ಸಚಿವರು. ಅದಕ್ಕೆ ಒಬ್ಬರು ಮುಖ್ಯ ವ್ಯಕ್ತಿ ಇರಲಿ ಅಂತಾ ಮಾಡಿದ್ದಾರೆ ಅಷ್ಟೇ ಎಂದು ಗುಡುಗಿದರು.