ಹುಬ್ಬಳ್ಳಿ: ಇಂದಿನ ಕೊರೊನಾ ಪರಿಸ್ಥಿತಿಯಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಆದರೆ ಜನ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಸುಲಭವಾಗಿ ಮಾಸ್ಕ್ ಸಿಗಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಮೊದಲ ಭಾರಿಗೆ ಸ್ವಯಂಚಾಲಿತ ಮಾಸ್ಕ್ ವೆಂಡಿಂಗ್ ಮಷೀನ್ ನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುತ್ತಿದೆ. ಈ ಮೂಲಕ ಕೇವಲ 2 ರೂ.ಗೆ ಸರ್ಜಿಕಲ್ ಮಾಸ್ಕ್ ಸಿಗಲಿದೆ.
ದೇಶದಲ್ಲಿ ಚೆನ್ನೈ ಬಳಿಕ ಇತಂಹದ್ದೊಂದು ಪ್ರಯೋಗವನ್ನು ಹುಬ್ಬಳ್ಳಿಯ ಯಂಗ್ ಇಂಡಿಯಾ ಸಂಸ್ಥೆ ಅನುಷ್ಕಾನಗೊಳಿಸಿದೆ. 20 ಸಾವಿರ ರೂಪಾಯಿ ವೆಚ್ಚದ 12 ಸ್ವಯಂಚಾಲಿತ ಮಾಸ್ಕ್ ವಿತರಣಾ ಯಂತ್ರಗಳನ್ನು ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟನೆ ಮಾಡಿ ಸಾರ್ವಜನಿಕರ ಬಳಕೆಗೆ ಚಾಲನೆ ನೀಡಿದರು.
Advertisement
Advertisement
ಕೇವಲ 2 ರೂಪಾಯಿ ನಾಣ್ಯ ಹಾಕಿ ಒಂದು ಮಾಸ್ಕ್ ಪಡೆಯಬಹುದಾದ ಈ ಮಾಸ್ಕ್ ವೆಂಡಿಂಗ್ ಮಷೀನ್ ಗಳನ್ನು ಆರಂಭದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಜನನಿಬಿಡ ಪ್ರದೇಶಗಳಾದ ಮಾರುಕಟ್ಟೆ, ಎಪಿಎಂಸಿ, ಬಸ್ ನಿಲ್ದಾಣ, ರೈಲು ನಿಲ್ದಾಣ, ಜಿಲ್ಲಾಧಿಕಾರಿ, ತಹಶಿಲ್ದಾರ್ ಕಚೇರಿ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಅಳವಡಿಸಲಾಗುವುದು. ಯಂಗ್ ಇಂಡಿಯಾ ಹುಬ್ಬಳ್ಳಿ ಚಾಪ್ಟರ್ ಅವರು ಪ್ರಾರಂಭಿಕ ಹಂತದಲ್ಲಿ 6 ತಿಂಗಳವರೆಗೆ ಮಾಸ್ಕ್ ಪೂರೈಕೆ ಮಾಡಿ, ಈ ಮಷೀನ್ ಗಳ ನಿರ್ವಹಣೆ ಮಾಡಲಿದ್ದು, ಅವಶ್ಯಕತೆಯಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಷೀನ್ ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಸಹಾಯ ಮಾಡಲಿದ್ದಾರೆ.
Advertisement
Advertisement
ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮಾಸ್ಕ್ ದೊರೆಯಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿಯ ಯಂಗ್ ಇಂಡಿಯಾ ಸಂಸ್ಥೆ ರಾಜ್ಯದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂಚಾಲಿತ 12 ಮಾಸ್ಕ್ ವೆಂಡಿಂಗ್ ಮಷೀನ್ ಗಳನ್ನು ನಗರದಲ್ಲಿ ಅಳವಡಿಸುತ್ತಿದೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 5 ರೂ. ನಿಂದ 10 ರೂ.ಗೆ ದೊರೆಯುವ ಮೂರು ಪದರಿನ ಸರ್ಜಿಕಲ್ ಮಾಸ್ಕ್ ಗಳು ಇಲ್ಲಿ ಕೇವಲ 2 ರೂಪಾಯಿಗೆ ದೊರೆಯಲಿವೆ. ಸಾರ್ವಜನಿಕರು 2 ರೂ. ನಾಣ್ಯವನ್ನು ಮಾಸ್ಕ್ ವೆಂಡಿಂಗ್ ಮಷೀನ್ ಗೆ ಹಾಕಿದರೆ 1 ಮಾಸ್ಕ್ ಸಿಗುತ್ತದೆ.
ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಉಪಯೋಗಿಸುವುದು ಅತೀ ಅವಶ್ಯ ಮತ್ತು ಕಡ್ಡಾಯವಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಈ ಅನುಕೂಲಕರ ಕಾರ್ಯ ತುಂಬಾ ಶ್ಲಾಘನೀಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಸ್ಕ್ ವೆಂಡಿಂಗ್ ಮಷೀನ್ ಅಭಿಯಾನವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್, ಯಂಗ್ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಡಾ.ಶ್ರೀನಿವಾಸ್ ಜೋಶಿ ಸೇರಿದಂತೆ ಯಂಗ್ ಇಂಡಿಯನ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.