– ಹಳ್ಳದಲ್ಲಿ ಕೊಚ್ಚಿ ಹೋದ ಸೈಕಲ್ ಸವಾರ
– ಧಾರವಾಡದಲ್ಲಿ ತಪ್ಪಿದ ದುರಂತ
– ಯಾದಗಿರಿ ಕೆಲ ಗ್ರಾಮಗಳು ಜಲಾವೃತ
ಬೆಂಗಳೂರು: ಶನಿವಾರ ತಡರಾತ್ರಿ ಸುರಿದ ಮಳೆ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತಲಾ ಓರ್ವ ಹಳ್ಳದಲ್ಲಿ ಕೊಚ್ಚಿ ಹೋಗಿದ್ರೆ, ಯಾದಗಿರಿಯ ಕೆಲ ಗ್ರಾಮಗಳು ಜಲಾವೃತಗೊಂಡಿವೆ. ಯಾದಗಿರಿಯ ಗ್ರಾಮವೊಂದರಲ್ಲಿ ಸುಮಾರು 20ಕ್ಕೂ ಹೆಚ್ಚು ಕುರಿಗಳು ಸಿಡಿಲು ತಾಗಿ ಸಾವನ್ನಪ್ಪಿದ್ದು, ಕುರಿಗಾಹಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ.
Advertisement
ಕೊಪ್ಪಳ ಮತ್ತು ಧಾರವಾಡದಲ್ಲಿ ಕೆರೆಯ ಕೋಡಿಗಳು ಒಡೆದಿದ್ದು, ನೀರು ರಸ್ತೆಯ ಮೇಲೆ ಹರಿದಿದೆ. ಧಾರವಾಡದಲ್ಲಿ ಸಾರಿಗೆ ಬಸ್ ಚಾಲಕ ದುಸ್ಸಾಹಸಕ್ಕೆ ಮುಂದಾಗಿದ್ದನು. ಕೊನೆಗೆ ಬಸ್ ಚಾಲಕನ ನಿಯಂತ್ರಣಕ್ಕೆ ಸಿಕ್ಕಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
Advertisement
Advertisement
ರಾಯಚೂರು: ಜಿಲ್ಲೆಯ ಮಸ್ಕಿಯ ಮಾರಲದಿನ್ನಿ ಕಿರು ಜಲಾಶಯ ಭರ್ತಿಹಿನ್ನೆಲೆ ಹಳ್ಳಕ್ಕೆ ಭಾರೀ ಪ್ರಮಾಣದ ನೀರು ಹರಿಸಲಾಗಿದೆ. ಏಕಾಏಕಿ ನೀರು ಬಿಟ್ಟಿದ್ದರಿಂದ ಮಸ್ಕಿ ಪಟ್ಟಣದಲ್ಲಿ ಹರಿಯುವ ಹಳ್ಳದಲ್ಲಿ ಓರ್ವ ಯುವಕ ಕೊಚ್ಚಿಹೋಗಿದ್ದು ಇನ್ನೋರ್ವ ವ್ಯಕ್ತಿಯನ್ನ ರಕ್ಷಿಸಲಾಗಿದೆ. ಹಳ್ಳಕ್ಕೆ ಬಹಿರ್ದಸೆಗೆ ಹೋಗಿದ್ದ ಚನ್ನಬಸಪ್ಪ ಹಾಗು ಜಲೀಲ ಹಳ್ಳದ ಮಧ್ಯೆ ಸಿಲುಕಿಕೊಂಡಿದ್ದರು.
Advertisement
ಮುಂಜಾಗ್ರತೆಯಿಲ್ಲದೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದ ಹಿನ್ನೆಲೆ ಹಗ್ಗ ತುಂಡಾಗಿ ಚನ್ನಬಸಪ್ಪ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರು ಸಿಬ್ಬಂದಿಯನ್ನ ರಕ್ಷಿಸಲಾಗಿದೆ. ಜಲೀಲನನ್ನ ಕ್ರೇನ್ ಬಳಸಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ. ಭಯದಲ್ಲಿ ಸಿಬ್ಬಂದಿಯೊಂದಿಗೆ ಹೊರಬರಲು ಜಲೀಲ ಹಿಂದೇಟು ಹಾಕಿದ್ದ, ಮನವೊಲಿಸಿ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಮಸ್ಕಿ ನಾಲೆಯ ಜಲಾನಯನ ಪ್ರದೇಶಗಳಾದ ಗಜೇಂದ್ರಗಡ, ಕುಷ್ಟಗಿ ಭಾಗದಲ್ಲಿ ಮಳೆಯಾಗಿದ್ದರಿಂದ ಮಸ್ಕಿ ಆಣೆಕಟ್ಟೆಯಿಂದ ಹೆಚ್ಚು ಪ್ರಮಾಣದ ನೀರು ಬಿಡಲಾಗಿದೆ. ನಾಲ್ಕು ಗೇಟ್‍ಗಳ ಮೂಲಕ ಸದ್ಯ 2000 ಕ್ಯೂಸೆಕ್ ನೀರು ಬಿಡಲಾಗಿದೆ. ಮಳೆ ಹಿನ್ನೆಲೆ ಮಸ್ಕಿ ನಾಲಾ ಯೋಜನೆಯಿಂದ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನಲೆ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.
ಕಣ್ಣೆದುರೆ ಚನ್ನಬಸಪ್ಪ ಕೊಚ್ಚಿಹೋಗಿದ್ದನ್ನ ಕಂಡ ಜಲೀಲ ಆತಂಕಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪತ್ತೆಯಾದ ಚನ್ನಬಸಪ್ಪನ ಮೃತದೇಹ ಪತ್ತೆಯಾಗಿದೆ.
ಧಾರವಾಡದಲ್ಲಿ ತಪ್ಪಿದ ದುರಂತ: ತುಂಬಿ ಹರಿಯುತಿದ್ದ ಹಳ್ಳದಲ್ಲಿ ಸ್ವಲ್ಪದರಲ್ಲೇ ಸಾರಿಗೆ ಬಸ್ ಬಚಾವಾದ ಘಟನೆ ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದ ಬಳಿಯ ತಾತ್ಕಾಲಿಕ ಸೇತುವೆ ಬಳಿ ನಡೆದಿದೆ. ತುಪ್ಪರಿಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಬಂದ ಹಿನ್ನೆಲೆ ಧಾರವಾದ ಸವದತ್ತಿ ರಸ್ತೆ ಕಡಿತವಾಗಿತ್ತು. ಇನ್ನು ನೀರು ಬಂದಿದ್ದರಿಂದ ತಾತ್ಕಾಲಿಕ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದನ್ನು ನೋಡಿಯೂ ಸಾರಿಗೆ ಬಸ್ ಚಾಲಕ ಬಸ್ ದಾಟಿಸಲು ಮುಂದಾಗಿದ್ದ. ಈ ವೇಳೆ ಬಸ್ ಹಳ್ಳದಲ್ಲಿ ಒಂದು ಬದಿಗೆ ವಾಲಿ ಬಚಾವ್ ಆಗಿದೆ.
ಯಾದಗಿರಿ ಗ್ರಾಮಗಳು ಜಲಾವೃತ: ಬೆಳಗಿನ ಜಾವದಿಂದ ಸುರಿಯುತ್ತಿರುವ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜಿಲ್ಲೆಯ ಶಹಪುರ ತಾಲೂಕಿನ ಎಂ ಕೊಳ್ಳೂರು, ಯಾದಗಿರಿ ತಾಲೂಕಿನ ಗಾಜರಕೋಟ, ಮತ್ತು ಸುರಪುರ ತಾಲೂಕಿನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮಳೆಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇಡೀ ರಾತ್ರಿ ಸುರಿದ ಮಳೆಗೆ ಕೆಲ ಮನೆಗಳು ಜಖಂಗೊಂಡಿದ್ದರೆ, ಇನ್ನು ಕೆಲವು ಮನೆಗಳು ಹಾಗೂ ಶೆಡ್ ಗಳ ಒಳಗಡೆ ನೀರು ತುಂಬಿಕೊಂಡಿದೆ. ಮನೆಯಲ್ಲಿರುವ ಗೃಹಪಯೋಗಿ ವಸ್ತುಗಳು ಜೋಳ, ಅಕ್ಕಿ ಹಾಗೂ ಇನ್ನಿತರೆ ಧವಸಧಾನ್ಯಗಳು ನೀರು ಪಾಲಾಗಿವೆ. ಗ್ರಾಮದ ರಸ್ತೆಗಳು ನದಿಯಂತಾಗಿದ್ದು, ಕೆಲ ಮನೆಗಳ ಒಳಗಡೆ ಅರ್ಧದಷ್ಟು ನೀರು ತುಂಬಿಕೊಂಡಿದ್ದರಿಂದ ಜನರು ಇಡೀ ರಾತ್ರಿ ನಿದ್ದೆ ಮಾಡದೇ ಎದ್ದು ಕುಳಿತಿದ್ದಲ್ಲದೆ, ಊಟವಿಲ್ಲದೆ ಪರದಾಡಿದ್ದಾರೆ. ಇನ್ನೂ ಇದೇ ಗ್ರಾಮದ ಹೊರ ವಲಯದಲ್ಲಿರುವ ಸಣ್ಣನರಸಪ್ಪ ಎಂಬವರು ದೊಡ್ಡಿಯಲ್ಲಿದ್ದ ಸುಮಾರು 25 ಕುರಿಗಳು ಸಿಡಲು ಬಡಿದು ಸಾವನ್ನಪ್ಪಿವೆ.
ಈರುಳ್ಳಿ ಬೆಳೆ ಹಾನಿ: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆ ಕೆ. ಮರಿಯನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜನಜೀವನ ಅಸ್ತವ್ಯಸ್ತವಾಗಿದ್ದು ರಾತ್ರಿಯಲ್ಲ ಜನ ಮನೆಯಿಂದ ನೀರು ಹೊರಹಾಕಿದ್ದಾರೆ. ಲಿಂಗಸುಗೂರು ತಾಲೂಕಿನ ಕಿಲ್ಲರಹಟ್ಟಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಗ್ರಾಮದ ಬಸವರಾಜ್ ಗದ್ದೆಪ್ಪ ಅನ್ನೋ ರೈತನ ಲಕ್ಷಾಂತರ ರೂಪಾಯಿ ಈರುಳ್ಳಿ ಬೆಳೆ ನೀರುಪಾಲಾಗಿದೆ. ಜಮೀನುಗಳಲ್ಲಿ ನೀರು ನಿಂತಿದ್ದು ಮಳೆ ಮುಂದುವರಿದಿದೆ. ಇದೇ ಪರಸ್ಥಿತಿ ಮುಂದುವರಿದರೆ ಹತ್ತಿ ,ಈರುಳ್ಳಿ ಸೇರಿ ಎಲ್ಲಾ ಬೆಳೆಗಳು ಸಂಪೂರ್ಣ ಹಾನಿಯಾಗಲಿವೆ. ಮೋಡ ಕವಿದ ವಾತಾವರಣ ಜಿಲ್ಲೆಯಾದ್ಯಂತ ಮುಂದುವರೆದಿದ್ದು ಜಿಟಿ ಜಿಟಿ ಮಳೆ ಸುರಿಯುತ್ತಿದೆ.
ಕೊಪ್ಪಳದಲ್ಲಿ ಕೊಚ್ಚಿ ಹೋದ ಸವಾರ: ಕೊಪ್ಪಳ ತಾಲೂಕಿನ ಹಿರೇಹಳ್ಳ ಜಲಾಶಯ ತುಂಬಿ ಹರಿಯುತ್ತಿದೆ. ನೀರಿನ ರಭಸಕ್ಕೆ ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಬಳಿ ಕಟ್ಟಲಾದ ಬ್ರಿಡ್ಜ ಕಂ ಬ್ಯಾರೇಜ್ ನ ತಡೆಗೋಡೆ ಕೊಚ್ಚಿಹೋಗಿದೆ. ಕಾಲು ಭಾಗವಷ್ಟು ಬ್ಯಾರೇಜ್ ತಡೆಗೋಡೆ ಒಡೆದು ಹೋಗಿದ್ದು ಕಳಪೆ ಕಾಮಗಾರಿ ಎಂದು ಜನರು ಆರೋಪಿಸುತ್ತಿದ್ದಾರೆ. ಅದರಂತೆ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ ಘಟನೆ ಕೂಡ ನಡೆದಿದೆ. ಕೊಪ್ಪಳ ತಾಲೂಕಿನ ಶಿವಪುರ ಮತ್ತು ಹುಲಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಹಳ್ಳ ಹರಿಯುತ್ತಿದ್ದು, ಸೈಕಲ್ ಮೇಲೆ ಹಳ್ಳ ದಾಟಲು ಹೋಗಿ ನೀರಿನ ರಭಸಕ್ಕೆ ಸವಾರ ಕೊಚ್ಚಿ ಹೋಗಿದ್ದಾನೆ.