ಬೆಂಗಳೂರು: ಕೊರೊನಾ ಎಂಬ ಮಹಾಮಾರಿ ವಕ್ಕರಿಸಿ ಒಂದು ವರ್ಷ ಕಳೆದಿದ್ದೂ ಆಯ್ತು. ಎಲ್ಲೆಡೆ ಕೋವಿಡ್ ಕಂಟ್ರೋಲ್‍ಗೂ ಬಂದಿತ್ತು. ಅಂತೂ ಇಂತೂ ಕೊರೊನಾ ತೊಲಗ್ತಪ್ಪಾ, ಇನ್ನಾದ್ರೂ ಟೆನ್ಷನ್ ಇಲ್ಲದೇ ಆರಾಮಾಗಿರ್ಬೋದು ಅನ್ನೋ ನೆಮ್ಮದಿಯಲ್ಲಿದ್ದಾಗಲೇ ಕೋವಿಡ್ 19 ಎರಡನೇ ಅಲೆ ರಾಜ್ಯಕ್ಕೆ ಬಹುದೊಡ್ಡ ಆಘಾತವನ್ನೇ ನೀಡಿದೆ. ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಸಾವಿರದ ಗಡಿ ದಾಟುತ್ತಿರುವ ಕೊರೊನಾ ಕೇಸ್ ಕಂಟ್ರೋಲ್‍ಗೆ ಬರೋ ಲಕ್ಷಣಗಳೇ ಕಾಣ್ತಿಲ್ಲ.
Advertisement
ಕೊರೊನಾ ಕಾರಣದಿಂದ ಕಳೆದ ವರ್ಷ ಜನರು ಅನುಭವಿಸಿದ ಕಷ್ಟ ನಷ್ಟಗಳು ಎಲ್ರಿಗೂ ಗೊತ್ತಿವೆ. ಲಾಕ್‍ಡೌನ್‍ನಿಂದ ಏನೆಲ್ಲಾ ಆಗೋಯ್ತು ಅನ್ನೋದು ಎಲ್ಲರ ಕಣ್ಣಿಗೂ ಕಟ್ಟಿದಂತಿದೆ. ಆದ್ರೆ ನಮ್ಮ ಜನ ಆಗ್ಲಿ.. ಸರ್ಕಾರ ಆಗ್ಲಿ ಇದ್ರಿಂದ ಪಾಠ ಕಲಿತಂತೆ ಕಾಣ್ತಿಲ್ಲ. ಸದ್ಯಕ್ಕಿರುವ ಕನಿಷ್ಠ ನಿಯಮಗಳನ್ನು ಕೂಡಾ ಯಾರು ಪಾಲನೆ ಮಾಡ್ತಿಲ್ಲ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಎಲ್ಲೂ ಕಂಡುಬರ್ತಿಲ್ಲ. ಇದರ ಪರಿಣಾಮವೋ ಏನೋ ಎಂಬಂತೆ ಎಲ್ಲಾ ಕಡೆ ಸೋಂಕು ಸ್ಫೋಟಿಸ್ತಿದೆ.
Advertisement
Advertisement
ರಾಜ್ಯದಲ್ಲಿ ನಿನ್ನೆ 1587 ಪ್ರಕರಣ ವರದಿ ಆಗಿದ್ದು, 10 ಮಂದಿ ಬಲಿ ಆಗಿದ್ದಾರೆ. ಅದರಲ್ಲೂ ಬೆಂಗಳೂರಲ್ಲಿ 1037 ಮಂದಿ ಸೋಂಕು ಬಾಧಿತರಾಗಿದ್ದಾರೆ. 6 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೋಂ ಐಸೊಲೇಷನ್‍ನಲ್ಲಿರುವವರು ಕೊರೊನಾ ರೂಲ್ಸ್ ಬ್ರೇಕ್ ಮಾಡೋದು ಹೆಚ್ಚಿದೆ. ಪ್ರಾಥಮಿಕ ಸಂಪರ್ಕಿತರಲ್ಲೇ ಶೇ.50ರಷ್ಟು ಮಂದಿಗೆ ಸೋಂಕು ಹೆಚ್ಚಿರುವುದು ಗಾಬರಿ ಮೂಡಿಸಿದೆ. ಹೀಗಾಗಿ ಒಂದು ಕೇಸ್‍ನಲ್ಲಿ ಕನಿಷ್ಠ 15 ಮಂದಿ ಸಂಪರ್ಕಿತರನ್ನು ಪತ್ತೆ ಹಚ್ಚಲು ಕಂದಾಯ ಇಲಾಖೆ ನೌಕರರು, ಎಂಜಿನಿಯರ್‍ಗಳು ಮತ್ತು ಶಿಕ್ಷಕರನ್ನು ಬಿಬಿಎಂಪಿ ಬಳಸಿಕೊಳ್ತಿದೆ.
Advertisement
ಐಎಲ್‍ಐ ಹಾಗೂ ಸಾರಿ ಕೇಸ್‍ಗಳಿಂದ ಸೋಂಕಿತರು ಮೃತಪಡುತ್ತಿರೋದ್ರಿಂದ ಬಿಬಿಎಂಪಿ ತೀವ್ರ ನಿಗಾ ಇಟ್ಟಿದೆ. ಸೋಂಕಿತರ ಚಿಕಿತ್ಸೆಗಾಗಿ ಸೋಮವಾರ ಬೆಂಗಳೂರಿನ ಮೂರು ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯೋದಾಗಿ ಬಿಬಿಎಂಪಿ ತಿಳಿಸಿದೆ. ಮಹಾರಾಣಿ ಕಾಲೇಜಿನ ನಾಲ್ವರು ಸೋಂಕಿತ ವಿದ್ಯಾರ್ಥಿನಿಯರು ಇದೀಗ ಚೇತರಿಸಿಕೊಂಡಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ ಅವರು ಪಿಪಿಇ ಕಿಟ್ ಧರಿಸಿ, ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಈ ಮಧ್ಯೆ ಸಚಿವ ಸುರೇಶ್ ಕುಮಾರ್ ಮಾತನಾಡಿ, ಸದ್ಯಕ್ಕೆ ಶಾಲೆಗಳನ್ನ ಮುಚ್ಚುವ ಅಗತ್ಯವಿಲ್ಲ. ಕೊರೊನಾ ಜೊತೆ ನಾವು ಬದುಕೋದು ಕಲಿಯಬೇಕು ಎಂದಿದ್ದಾರೆ.
ರಾಜ್ಯದಲ್ಲಿ ಜಾತ್ರೆಗಳಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗ್ತಿದ್ದು, ಹಳ್ಳಿಗಳಿಗೆ ಕೊರೊನಾ ಹರಡದಂತೆ ನೋಡಿಕೊಳ್ಳಿ ಅಂತ ಮೋದಿ ಸೂಚನೆಯನ್ನ ನೀಡಿದ್ದಾರೆ. ಈ ನಡುವೆ ಮದುವೆ, ದೇವಸ್ಥಾನ, ಜಾಲಿಟ್ರಿಪ್ ಹಿಸ್ಟರಿ ಇರೋರಿಗೆ ಕೊರೊನಾ ಕಾಡ್ತಿದೆ. ಜೊತೆಗೆ ಜಾತ್ರೆಗಳ ಮೇಲೆ ಕಣ್ಣಿಡುವಂತೆ ಕೊರೊನಾ ತಜ್ಞರ ಸಮಿತಿ ಸೂಚನೆ ನೀಡಿದೆ. ಜಾತ್ರೆಯ ಮೇಲೆ ನಿಗಾವಹಿಸಲು ಸಾಧ್ಯವಾಗದಿದ್ರೆ ಸಂಪೂರ್ಣ ನಿರ್ಬಂಧ ಹೇರಿ ಅಂತ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಹೀಗಾಗಿ ಸರ್ಕಾರದ ದೃಷ್ಟಿ ಜಾತ್ರೆಗಳತ್ತಲೂ ನೆಟ್ಟಿದೆ.
ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆಡೆಯೂ ಕೊರೊನಾ ತಾಂಡವ ಮುಂದುವರಿದಿದೆ. ಕಲಬುರಗಿಯಲ್ಲಿ 61, ತುಮಕೂರಲ್ಲಿ 50, ಮೈಸೂರಲ್ಲಿ 49, ದಕ್ಷಿಣ ಕನ್ನಡದಲ್ಲಿ 47, ಬೀದರ್‍ನಲ್ಲಿ 40 ಮಂದಿಗೆ ಸೋಂಕು ತಗುಲಿದೆ. ಮೈಸೂರಿನಲ್ಲಿ ಇಬ್ಬರು ಸೋಂಕಿಗೆ ಬಲಿ ಆಗಿದ್ದಾರೆ. ಬೆಳಗಾವಿಯಲ್ಲಿ ಮೊನ್ನೆ ಕಂಡು ಬಂದ 23 ಕೇಸ್‍ಗಳ ಪೈಕಿ 7 ಪ್ರಕರಣಗಳಿಗೆ ರಾಜಸ್ಥಾನ ಲಿಂಕ್ ಇದೆ. ಈ ಏಳು ಮಂದಿಯೂ ಒಂದೇ ಬಡಾವಣೆಯಲ್ಲಿ ವಾಸವಿದ್ದು, ಇದೀಗ ಆ ಬಡಾವಣೆಯನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಅಂತ ಘೋಷಿಸಲಾಗಿದೆ. ವಿಜಯಪುರದ ಸೈನಿಕ ಶಾಲೆಯಲ್ಲಿ 8 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅವ್ರನ್ನು ಐಸೊಲೇಟ್ ಮಾಡಲಾಗಿದೆ. ಸಮಾಧಾನದ ವಿಚಾರ ಅಂದ್ರೆ, ಬಳ್ಳಾರಿಯೀಗ ದಕ್ಷಿಣ ಆಫ್ರಿಕಾ ಕೊರೋನಾದಿಂದ ಮುಕ್ತವಾಗಿದೆ. ರೂಪಾಂತರಿ ಕೊರೋನಾದಿಂದ ಬಳಲಿದ್ದ ಏಳು ಮಂದಿ ಚೇತರಿಸಿಕೊಂಡಿದ್ದಾರೆ.
ಇತ್ತ ಮಹಾರಾಷ್ಟ್ರದಲ್ಲಿ ಕೊರೊನಾ ಮಾರಿ ತಾಂಡವವಾಡ್ತಿದೆ. ಕೊರೊನಾ 2ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಪಂಜಾಬ್, ಗುಜರಾತ್‍ನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿದೆ. ಗುಜರಾತ್‍ನ 8 ನಗರಗಳಲ್ಲಿ ಮಾಲ್, ಮಲ್ಟಿಫ್ಲೆಕ್ಸ್‍ಗಳನ್ನು ವಾರಾಂತ್ಯದಲ್ಲಿ ಮುಚ್ಚಲು ನಿರ್ಧರಿಸಲಾಗಿದೆ. ಅಲ್ಲದೆ ಶಾಲೆಗಳನ್ನ ಏಪ್ರಿಲ್-10ರ ವರೆಗೆ ಸಂಪೂರ್ಣವಾಗಿ ಬಂದ್ ಮಾಡಲು ಅದೇಶ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಮಾಲ್, ಮಲ್ಟಿಪ್ಲೆಕ್ಸ್, ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸಬೇಕು. ಥಿಯೇಟರ್‍ಗಳಲ್ಲಿ ಹೌಸ್‍ಫುಲ್ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಪಂಜಾಬ್‍ನಲ್ಲೂ ಈ ತಿಂಗಳ 31ರವರೆಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. 11 ಜಿಲ್ಲೆಗಳಲ್ಲಿ ನೈಟ್ ಕಫ್ರ್ಯೂ ಜಾರಿಯಲ್ಲಿದ್ದು, ಸಭೆ ಸಮಾರಂಭ ರದ್ದು ಮಾಡಲಾಗಿದೆ. ಒಟ್ಟಾರೆ ಕೊರೊನಾ 2ನೇ ಅಲೆ ದಟ್ಟವಾಗಿದ್ದು, ಜನತೆ ಇನ್ನಾದ್ರೂ ಎಚ್ಚೆತ್ತುಕೊಳ್ಳಬೇಕಿದೆ.