ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ನಡುವೆಯೇ ಮಳೆರಾಯನ ಆರ್ಭಟ ಜೋರಾಗಿ ಇದೆ. ಕಾರವಾರದಲ್ಲಿ ಭಾರೀ ಮಳೆಗೆ ಅಮದಳ್ಳಿ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡುವಂತಾಯ್ತು.
ಜಿಲ್ಲೆಯ ಬೆಳಗಾವಿಯ ಚಿಕ್ಕೋಡಿ ಉಪ ವಿಭಾಗದ ಕೃಷ್ಣಾ ನದಿ ತೀರದಲ್ಲಿ ಈಗ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಕೋಂಕಣ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ ಕರ್ನಾಟಕದ ವೇದಗಂಗಾ, ದೂಧಗಂಗಾ, ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ 6 ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ.
Advertisement
Advertisement
ದೂಧಗಂಗಾ ನದಿಗೆ ನಿರ್ಮಿಸಿರುವ ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಮಲಿಕವಾಡ-ದತ್ತವಾಡ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುನ್ನೂರ-ಬಾರವಾಡ ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರು-ಕಲ್ಲೋಳ ಸೇತುವೆಗಳು ಮುಳುಗಡೆಯಾಗಿದ್ದು, ಪರ್ಯಾಯ ಮಾರ್ಗಗಳಿಂದ ಜನ ಸಂಚರಿಸುತ್ತಿದ್ದಾರೆ. ಅಲ್ಲದೆ ಕೃಷ್ಣಾ ನದಿಗೆ 65 ಸಾವಿರ ಕ್ಯೂಸೆಕ್ಸ್ ನೀರು ಒಳ ಹರಿವು ಇದ್ದು, ಈ ಪ್ರಮಾಣ 1 ಲಕ್ಷ 50 ಸಾವಿರ ಮೀರಿದರೆ ಕೃಷ್ಣಾ ನದಿ ತನ್ನ ಪಾತ್ರವನ್ನ ಬಿಟ್ಟು ಹೊರಗೆ ಬರುತ್ತದೆ. ಇದೆ ಪ್ರಮಾಣದ ನೀರು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಪ್ರವಾಹ ಎದುರಿಸಲು ಸಕಲ ಸಿದ್ಧಗೊಂಡಿದೆ.
Advertisement
Advertisement
ಕೃಷ್ಣನಗರಿ ಉಡುಪಿಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮುಂಜಾಗ್ರತಾ ಕ್ರಮದಿಂದ ಮುಂದಿನ ಮೂರು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 36 ಮಿಲಿ ಮೀಟರ್ ಮಳೆ ಬಿದ್ದಿದ್ದು, ಕಾಪು ತಾಲೂಕಿನ ಇನ್ನಾ ಗ್ರಾಮದಲ್ಲೇ ಅತೀ ಹೆಚ್ಚು 138 ಮಿಲಿ ಮೀಟರ್ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆ ಆಗಿದೆ. ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗಿದೆ. ನೇತ್ರಾವತಿ ನದಿಯಲ್ಲಿ ರಭಸದಲ್ಲಿ ಹರಿಯುತ್ತಿದ್ದು, ಬಂಟ್ವಾಳದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಇಂದಿನಿಂದ ಜುಲೈ 14 ರವರೆಗೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಧಾರವಾಡದಲ್ಲೂ ಭಾರೀ ಮಳೆಯಾಗಿದೆ. ಮನೆಗಳಿಗೆ ನೀರು ನುಗ್ಗಿದ ನೀರನ್ನು ಹೊರ ಹಾಕುವಲ್ಲಿ ಜನರು ಹರಸಾಹಸಪಟ್ಟಿದ್ದಾರೆ. ಇತ್ತ ಗದಗದ ಗಜೇಂದ್ರಗಡ, ರೋಣ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನಲ್ಲೂ ಧಾರಾಕಾರ ಮಳೆ ಆಗಿದೆ. ಹಾವೇರಿಯ ಶಿಗ್ಗಾಂವಿ, ಬ್ಯಾಡಗಿ, ಹಿರೇಕೆರೂರು ಹಾಗೂ ಹಾನಗಲ್ ತಾಲೂಕಿನಲ್ಲೂ ಮಳೆ ಆಗಿದೆ.