ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಇಲ್ಲ: ಸಚಿವ ಸುಧಾಕರ್

Public TV
2 Min Read
K Sudhakar

ಚಿಕ್ಕಬಳ್ಳಾಪುರ: ಮುಂದಿನ ವಾರ ರಾಜ್ಯಕ್ಕೆ 12.5 ಲಕ್ಷ ಡೋಸ್ ಲಸಿಕೆ ಸಿಗಲಿದೆ. ಅಲ್ಲದೆ ನಾಳೆ ತುರ್ತು 4 ಲಕ್ಷ ಡೋಸ್ ಲಸಿಕೆ ಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಲಸಿಕೆಯ ಕೊರತೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಚಿಕ್ಕಬಳ್ಳಾಪುರ ತಾಲೂಕು ಆವಲನಾಗೇನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಆಗುವುದಿಲ್ಲ. ನಾನೇ ಸ್ವತಃ ಕೇಂದ್ರ ಆರೋಗ್ಯ ಸಚಿವರ ಬಳಿ ಮಾತನಾಡಿದ್ದೇನೆ. ರಾಜ್ಯಕ್ಕೆ 12.5 ಲಕ್ಷ ಡೋಸ್ ಲಸಿಕೆ ಮುಂದಿನ ವಾರ ಸಿಗಲಿದೆ. ಆದರೆ ತುರ್ತು ನಾಳೆ ವಿಮಾನದ ಮೂಲಕ 4 ಲಕ್ಷ ಡೋಸ್ ಲಸಿಕೆ ಸಹ ಬರುತ್ತಿದೆ ಎಂದು ತಿಳಿಸಿದರು.

vaccine pakistan

ಕೋವಿಡ್ ಎರಡನೇ ಅಲೆ ಇದೆ. ಅನೇಕ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನಾಗರಿಕರು ಕೂಡ ಕೋವಿಡ್ ಸುರಕ್ಷತಾ ಕ್ರಮ ಅನುಸರಿಸಬೇಕು ಎಂಬುದನ್ನು ಅರಿಯಬೇಕು. ಅನಗತ್ಯವಾಗಿ ಗುಂಪುಗೂಡುವುದು, ಮಾಸ್ಕ್ ಧರಿಸದಿರುವುದು ಮೊದಲಾದ ಕ್ರಮಗಳಿಗೆ ಈಗಾಗಲೇ ಕಡಿವಾಣ ಹಾಕಲಾಗಿದೆ. ಸಭೆ, ಸಮಾರಂಭಗಳನ್ನು 2 ತಿಂಗಳ ಮಟ್ಟಿಗೆ ಮುಂದೂಡಬೇಕು ಎಂದು ಕೋರಿದರು.

ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು. ಇದರಿಂದಾಗಿ ಹೆಚ್ಚಿನ ಜನರಿಗೆ ಲಸಿಕೆ ನೀಡಬಹುದು. ಎಲ್ಲರೂ ಕೂಡಲೇ ಕೋವಿಡ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಬೇಕು ಎಂದು ಸಚಿವರು ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ.

coronavirus

ಕಾನೂನು ಕ್ರಮ ಜಾರಿ
ಅಮಾಯಕ ದಲಿತ ಯುವಕ ಸ್ವಂತ ದುಡಿಮೆಯಿಂದ ಆತ್ಮಗೌರವ, ಸ್ವಾಭಿಮಾನದ ಬದುಕನ್ನು ಬದುಕುತ್ತಿದ್ದ. ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯಾಗಿದ್ದ ಅವರನ್ನು ಹಿಂದಿನ ಯಾವುದೋ ವೈಷಮ್ಯದಿಂದ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಅಂತಹ ಪಾಪಿಗಳ ವಿರುದ್ಧ ಕಾನೂನು ಕ್ರಮ ಜಾರಿಯಾಗಲಿದೆ. ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಇದರ ಹಿಂದೆ ಇರುವವವರ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲು ಹೇಳಲಾಗಿದೆ. ಇದಕ್ಕೆ ಕುಮ್ಮಕ್ಕು ನೀಡಿದವರನ್ನು ಕೂಡ ಬಿಡುವ ಪ್ರಶ್ನೆಯೇ ಇಲ್ಲ. 56 ವರ್ಷಗಳ ನಂತರ ನನ್ನ ಕ್ಷೇತ್ರದಲ್ಲಿ ಅಪರಾಧ ನಡೆದಿದೆ. ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆಯಾಗಲಿದೆ. ಈ ಘಟನೆಯಿಂದ ಬಹಳ ದುಃಖವಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *