ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಲಸಿಕೆ : ಸುಧಾಕರ್

Public TV
2 Min Read
sudhakar web 2

ಬೆಂಗಳೂರು: ರಾಜ್ಯದಲ್ಲಿ ಒಟ್ಟು 1,38,656 ಮಂದಿಗೆ ಕೊರೊನಾ ಲಸಿಕೆ ನೀಡಿದ್ದು, ಕೆಲವರಿಗೆ ಮಾತ್ರ ಅಡ್ಡ ಪರಿಣಾಮವಾಗಿದೆ. ಯಾರೂ ಮರಣ ಹೊಂದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1,36,882 ಮಂದಿಗೆ ಕೋವಿಶೀಲ್ಡ್, 1,774 ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಈ ಪೈಕಿ ಶೇ.2 ರಿಂದ 3.5 ಜನರಿಗೆ ಸ್ವಲ್ಪ ಅಡ್ಡಪರಿಣಾಮ ಉಂಟಾಗಿದೆ. 8,47,908 ಮಂದಿ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 3,27,201 ಸರ್ಕಾರಿ ಆರೋಗ್ಯ ಸಿಬ್ಬಂದಿ, 4,45,389 ಖಾಸಗಿ ಆರೋಗ್ಯ ಸಿಬ್ಬಂದಿ ಇದ್ದಾರೆ. ಒಟ್ಟು 7,72,591 ಆರೋಗ್ಯ ಸಿಬ್ಬಂದಿಗಳಿದ್ದಾರೆ. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರು 75,318 ಮಂದಿ ಇದ್ದಾರೆ. ಕೋವ್ಯಾಕ್ಸಿನ್ 1,46,240 ಡೋಸ್ ಇಂದು ಬರಲಿದೆ ಎಂದರು.

hbl sudhakar

ಲಸಿಕೆ ಪಡೆದರೆ ಕೋವಿಡ್‍ನಿಂದ ದೂರವಿರಬಹುದು. ಕೆಲ ತಪ್ಪು ಮಾಹಿತಿಗಳಿಂದ ಅಂಜಿಕೆ ಉಂಟಾಗಿದೆ. 2 ನೇ ಹಂತದಲ್ಲಿ ರಾಜ್ಯದ ಒಂದೂವರೆಯಿಂದ ಎರಡು ಕೋಟಿ ಜನರಿಗೆ ಲಸಿಕೆ ನೀಡಬೇಕಾಗುತ್ತದೆ. ಇದು ಬಹುದೊಡ್ಡ ಸವಾಲಾಗಿದೆ ಎಂದು ತಿಳಿಸಿದರು.

ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರವನ್ನು ನೇರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಮೊದಲು ಇಲಾಖೆಗಳು ಬೇರೆಯಾಗಿದ್ದರಿಂದ ಕೋವಿಡ್ ನಿರ್ವಹಣೆ ಸಮಸ್ಯೆಯಾಗಿತ್ತು. ನಂತರ ಒಂದೇ ಇಲಾಖೆ ಆಗಿದ್ದರಿಂದ ಕೋವಿಡ್ ನಿಯಂತ್ರಣಕ್ಕೆ ಬಂತು. ಲಸಿಕೆ ಬಂದ ಬಳಿಕ ಎರಡೂ ಇಲಾಖೆಗಳ ಸಂಯೋಜನೆ ಮೂಲಕ ಹೆಚ್ಚಿನ ಜನರಿಗೆ ತಲುಪಿಸಬೇಕಿದೆ. ಆಡಳಿತ ವೈಫಲ್ಯದಿಂದ ಸಮಸ್ಯೆಯಾಗಬಾರದು. ಜನರ ಹಿತದೃಷ್ಟಿಯಿಂದ ಎರಡೂ ಇಲಾಖೆಗಳನ್ನು ಒಬ್ಬರಿಗೇ ನೀಡಬೇಕು ಎಂದು ಸಿಎಂಗೆ ಮನವಿ ಮಾಡುತ್ತೇನೆ. ಕೋವಿಡ್ 2ನೇ ಅಲೆ ಬಂದರೆ ಇಂತಹ ಸಿದ್ಧತೆ ಅಗತ್ಯ ಎಂದು ಹೇಳಿದರು.

Sudhakar CM BSY

ನಾವೆಲ್ಲರೂ ಆತ್ಮೀಯರು. ಮುಖ್ಯಮಂತ್ರಿಗಳ ಕೈ ಬಲಪಡಿಸಲು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಸಿಎಂ ಕೈ ಬಲಪಡಿಸಲು ಒಂದು ರೀತಿಯಲ್ಲಿ ರಾಜಕೀಯ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಂಡು, ಶೇಕಡಾ ಮೂರರಷ್ಟು ಮತ ಇರದಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮುವತ್ತೈದು ಸಾವಿರ ಬಹುಮತಗಳಿಂದ ಗೆದ್ದು ಬಂದಿದ್ದೇನೆ. ಹಾಗೆಯೇ ಎಂಟಿಬಿ ನಾಗರಾಜ್ ಅವರು ವಸತಿ ಸಚಿವರಾಗಿದ್ದವರು ನನ್ನ ಮಾತು ಕೇಳಿ ರಾಜೀನಾಮೆ ನೀಡಿ ಬಂದರು. ಹೀಗೆ ಎಲ್ಲ ಸಚಿವರ ರಕ್ಷಣೆ ಕೂಡ ನನಗೆ ಮುಖ್ಯವಾಗಿದೆ. ಅಲ್ಲದೆ ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರೇನು ಮಾಡಬೇಕಿತ್ತು ಎಂದು ಹೇಳಲು ಸಾಧ್ಯವಿಲ್ಲ. ಅವರ ತಂಡ ಸದಸ್ಯನಾಗಿ ಅವರಿಗೆ, ಸರ್ಕಾರಕ್ಕೆ, ಪಕ್ಷಕ್ಕೆ ಒಳ್ಳೆಯ ಹೆಸರು ತರಲು ಆತ್ಮವಂಚನೆ ಮಾಡಿಕೊಳ್ಳದೆ ಕೆಲಸ ಮಾಡುತ್ತಿದ್ದೇನೆ ಎಂದರು.

ವ್ಯಾಕ್ಸಿನೇಷನ್ ನಡೆಯುತ್ತಿರುವ ಈ ಸಂದರ್ಭದಲ್ಲಿ ಮತ್ತು ತಜ್ಞರ ಪ್ರಕಾರ ಫೆಬ್ರವರಿ ಯಲ್ಲಿ ಎರಡನೇ ಅಲೆ ಸಾಧ್ಯತೆಗಳ ಹಿನ್ನೆಲೆಯಲ್ಲಿ ವೈಜ್ಞಾನಿಕ ನಿರ್ಧಾರ ಕೈಗೊಳ್ಳಬೇಕಿತ್ತು ಎಂಬುದು ನನ್ನ ಅಭಿಪ್ರಾಯ. ಇದನ್ನು ಮುಖ್ಯಮಂತ್ರಿಯವರಿಗೆ ತಿಳಿಸುತ್ತೇನೆ. ತುಮಕೂರಿನಲ್ಲಿ ವೈದ್ಯಾಧಿಕಾರಿಗಳು ಮೊದಲೇ ಲಸಿಕೆ ಪಡೆದಿದ್ದಾರೆ. ನಂತರ ಛಾಯಾಚಿತ್ರಕ್ಕಾಗಿ ಕೇಳಿದಾಗ ಲಸಿಕೆ ಪಡೆದಂತೆ ಮಾಡಲಾಗಿದೆ. ಇದರಲ್ಲಿ ಲೋಪವಿಲ್ಲ ಎಂದು ಸ್ಪಷ್ಟಪಡಿಸಿದರು.

sudhakar web

ಗಣಿಗಾರಿಕೆಯಲ್ಲಿ ಜಿಲೆಟಿನ್ ಅಗತ್ಯಕ್ಕಿಂತ ಹೆಚ್ಚು ಬಳಸುವುದು, ಆಳವಾಗಿ ಇಟ್ಟು ಸಿಡಿಸುವುದು ಮೊದಲಾದ ದುರಾಲೋಚನೆಯ ಕೆಲಸ ಮಾಡಲಾಗುತ್ತದೆ. ಇದರಿಂದಾಗಿ ಸಮೀಪದ ಜನರ ಮನೆಗಳಲ್ಲಿ ಬಿರುಕು ಬಿಡುವ ಘಟನೆ ಸಂಭವಿಸುತ್ತಿದೆ. ಗಣಿಗಾರಿಕೆ ಇಲಾಖೆಯ ಅಧಿಕಾರಿಗಳ ಮೂಗಿನ ಕೆಳಗೆಯೇ ಇದು ನಡೆಯುತ್ತಿದೆ. ಪೊಲೀಸರು ಬಹಳ ಎಚ್ಚರದಿಂದ ಇದ್ದು, ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *