ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿತ್ಯವೂ 200ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಇಂದು ಕೂಡ 210 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 7,944ಕ್ಕೆ ಏರಿಕೆಯಾಗಿದೆ.
ಬೆಂಗಳೂರಿಗರಿಗೆ ಇಂದು ಕೊಂಚ ರಿಲೀಫ್ ಸಿಕ್ಕಂತಾಗಿದ್ದು, ಬಳ್ಳಾರಿ ಹಾಗೂ ಕಲಬುರಗಿಯಲ್ಲಿ ಕೊರೊನಾ ಮಹಾ ಸ್ಫೋಟ ಸಂಭವಿಸಿದೆ. ಕಳೆದ 24 ಗಂಟೆಯಲ್ಲಿ ಬಳ್ಳಾರಿ ಹಾಗೂ ಕಲಬುರಗಿಯಲ್ಲಿ ತಲಾ 48 ಮಂದಿಗೆ ಸೋಂಕು ಪತ್ತೆಯಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್ ಪ್ರಕಾರ, ಬಳ್ಳಾರಿ 48, ಕಲಬುರಗಿ 48, ದಕ್ಷಿಣ ಕನ್ನಡ 23, ರಾಮನಗರ 21, ಬೆಂಗಳೂರು ನಗರ 17, ಯಾದಗಿರಿ 8, ಮಂಡ್ಯ 7, ಬೀದರ್ 6, ಗದಗ 5, ರಾಯಚೂರು 4, ಹಾಸನ 4, ಧಾರವಾಡ 4, ದಾವಣಗೆರೆ 3, ಚಿಕ್ಕಮಗಳೂರು 3, ವಿಜಯಪುರ 2, ಉತ್ತರ ಕನ್ನಡ 2, ಮೈಸೂರು 2, ಬಾಗಲಕೋಟೆ, ಶಿವಮೊಗ್ಗ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಇಂದು ಪತ್ತೆಯಾದ 210 ಸೋಂಕಿತರ ಪೈಕಿ 58 ಜನರು ಅಂತರಾಜ್ಯ ಹಾಗೂ 21 ಮಂದಿ ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು 179 ಜನರು ಕೊರೊನಾದಿಂದ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು 7,944 ಸೋಂಕಿತರಲ್ಲಿ 2,843 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 4,983 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು ಕೊರೊನಾ ತನ್ನ ಮರಣ ಕೇಕೆಯನ್ನು ಮುಂದುವರಿಸಿದ್ದು 12 ಮಂದಿ ಸಾವನ್ನಪ್ಪಿರೋದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ.