ರಾಜ್ಯದಲ್ಲಿ ಇಂದು 1,843 ಮಂದಿಗೆ ಸೋಂಕು- 25 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

Public TV
2 Min Read
Corona 1 10 app

-ಕೊರೊನಾ ಸೋಂಕಿಗೆ 30 ಮಂದಿ ಬಲಿ
-ಬೆಂಗಳೂರಿನಲ್ಲಿ 10 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಇಂದು 1,843 ಮಂದಿಗೆ ಕೊರೊನಾ ಪಾಟಿಸಿಟಿವ್ ದೃಢವಾಗಿದ್ದು, 30 ಮಂದಿ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 15,880 ಕೊರೊನಾ ಟೆಸ್ಟ್ ಮಾಡಲಾಗಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಟೆಸ್ಟ್ ಪ್ರಮಾಣ ಕಡಿಮೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

Sudhakar 2

ಬೆಂಗಳೂರಿನಲ್ಲಿ 981 ಪಾಸಿಟಿವ್ ಪ್ರಕರಣಗಳು ಇಂದು ವರದಿಯಾಗಿದೆ. ಇಂದು 10 ಮಂದಿ ಬೆಂಗಳೂರಿನಲ್ಲಿ ಬಲಿಯಾಗಿದ್ದು, ಸಾವಿನ ಸಂಖ್ಯೆ 154ಕ್ಕೇರಿದೆ. ಅಲ್ಲದೇ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರ ಗಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಕ್ಯೆ 25,317 ಕ್ಕೇರಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 1.58, ಬೆಂಗಳೂರಿನಲ್ಲಿ ಶೇ. 1.51 ರಷ್ಟಿದೆ.

ಕೋವಿಡ್ ಕೇರ್ ಸೆಂಟರ್ ಮೂಲಕ ಬೆಂಗಳೂರಿನಲ್ಲಿ ಮುಂದಿನ 2-3 ದಿನಗಳಲ್ಲಿ 10 ಸಾವಿರ ಬೆಡ್‍ಗಳನ್ನು ಸಿದ್ಧ ಮಾಡಿಸಲಿದ್ದೇವೆ ಎಂದು ಸಚಿವ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೇ 6,600 ಬೆಡ್ ಗಳನ್ನು ಸಿದ್ಧ ಮಾಡಿದ್ದೇವೆ. ಖಾಸಗಿ ಆಸ್ಪತ್ರೆಗಳು ತಮ್ಮ ಸಾಮರ್ಥ್ಯದ ಅರ್ಧದಷ್ಟು ಬೆಡ್‍ಗಳನ್ನು ನೀಡುವುದಾಗಿ ಸರ್ಕಾರಕ್ಕೆ ಅಭಯ ನೀಡಿದ್ದವು. ಇದರ ಅನ್ವಯ ನಮಗೆ ನಗರದಲ್ಲಿ 3 ಸಾವಿರ ಬೆಡ್ ಗಳು ಲಭ್ಯವಿದೆ. ಆದರೆ 156 ಬೆಡ್‍ಗಳು ಮಾತ್ರ ಭರ್ತಿ ಆಗಿದೆ. ಈ ಸಮಸ್ಯೆಯನ್ನು ಬಗೆಹರಿಸುವ ಹೊಣೆಯನ್ನು ಸಚಿವ ಆರ್.ಅಶೋಕ್ ಅವರಿಗೆ ಸಿಎಂ ವಹಿಸಿದ್ದಾರೆ ಎಂದು ತಿಳಿಸಿದರು.

Coronaviru

ಬೆಂಗಳೂರಿನ 17 ಮೆಡಿಕಲ್ ಕಾಲೇಜುಗಳಲ್ಲಿ 2,000 ಜನ ಅಂತಿಮ ವರ್ಷದ ವಿದ್ಯಾರ್ಥಿಗಳು ಪಾಸ್ ಔಟ್ ಆಗುತ್ತಿದ್ದಾರೆ. ಅವರು ಪಾಸ್ ಔಟ್ ಆಗುತ್ತಿದಂತೆ ಹೌಸ್ ಸರ್ಜನ್ ಆಗಿ ಕೋವಿಡ್ ಸರ್ವಿಸ್ ಬಳಸಿಕೊಳ್ಳಲು ನಿರ್ಧಾರ ಮಾಡಿದ್ದೇವೆ. ಪೋಸ್ಟ್ ಗ್ರಾಜುಯೇಶನ್‍ನಲ್ಲಿ ನೀಟ್ ಎಗ್ಸಾಂ ಬರೆಯುವವರು, ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿದರೆ 5 ಗ್ರೇಸ್ ಮಾರ್ಕ್ಸ್ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

1918 ರಲ್ಲಿ ಸ್ಪ್ಯಾನಿಷ್ ಫ್ಲೂ ಬಂದಾಗ 102 ವರ್ಷದ ಹಿಂದೆ ನೋಟಿಸ್ ನೀಡಿದ್ದು ನನಗೆ ಸಿಕ್ಕಿದೆ. 102 ವರ್ಷಗಳ ಹಿಂದೆ ಇದೇ ರೀತಿ ಸ್ವಚ್ಚತೆ, ಸ್ಯಾನಿಟೈಸ್ ಬಗ್ಗೆ ಸಾಮಾಜಿಕ ಅಂತರದ ಬಗ್ಗೆ ತಿಳಿಸಿದ್ದಾರೆ. ಈಗ ರಾಜ್ಯದ ಜನರು ಸಂಕಷ್ಟದಲ್ಲಿದ್ದು, ಸರ್ಕಾರ ಅವರ ನೆರವಿಗೆ ಬರಲು ಕಾರ್ಯ ಪ್ರವೃತ್ತಿಯಾಗಿದ್ದೇವೆ. ಜನರು ಕೂಡ ಸಹಕಾರ ನೀಡಿ ಸೋಂಕಿನ ಕುರಿತು ಮತ್ತಷ್ಟು ಜಾಗೃತಿ ವಹಿಸಬೇಕಿದೆ ಎಂದು ಮನವಿ ಮಾಡಿದರು.

Sudhakar

ಕೋವಿಡ್ ವಾರಿಯರ್ಸ್ ಸಂಬಳ ದುಪ್ಪಟ್ಟು: ಕೊರೊನಾದಂತಹ ಸಂದಿಗ್ಧ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿ, ಬಿ ಮತ್ತು ಸಿ, ಡಿ ಗ್ರೂಪ್ ನೌಕರರ ಸಂಬಳವನ್ನು ದುಪ್ಪಟ್ಟು ಮಾಡುವ ಚಿಂತನೆ ಮಾಡಿದ್ದೇವೆ. ಸರ್ಕಾರದ ಹಂತದಲ್ಲಿ ಸಿಎಂ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಕಳೆದ 120 ದಿನಗಳಿಂದ ಆರೋಗ್ಯ ಸಿಬ್ಬಂದಿ ಶ್ರಮ ವಹಿಸುತ್ತಿದ್ದು, ಅವರ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ನಾವೆಲ್ಲರೂ ಸೇರಿ ಆ ಕೆಲಸ ಮಾಡೋಣ, ಅವರಿಗೆ ನೈತಿಕ ಬೆಂಬಲ ನೀಡೋಣ ಎಂದು ಸಚಿವರು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *