ಶಿವಮೊಗ್ಗ: ಮಹಾಭಾರತ ಎಂದಾಕ್ಷಣ ಪಂಚ ಪಾಂಡವರು ನೆನಪಿಗೆ ಬರುತ್ತಾರೆ. ಆದರೆ ರಾಜ್ಯದಲ್ಲಿ ಪಂಚ ಕೌರವರು ಕಾಣ ಸಿಗುತ್ತಿದ್ದಾರೆ ಎಂದು ಹೇಳುವ ಮೂಲಕ ಸಚಿವ ಈಶ್ವರಪ್ಪ ಕಾಂಗ್ರೆಸ್ ನಾಯಕರನ್ನು ಪಂಚ ಕೌರವರಿಗೆ ಹೋಲಿಕೆ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಸಚಿವರು, ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಈಗಲೇ ಲಾಬಿ ಆರಂಭವಾಗಿದೆ. ಐದು ಜಾತಿಯವರು ಒಬ್ಬೊಬ್ಬರು ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್, ತನ್ವೀರ್ ಸೇಠ್ ಸೇರಿದಂತೆ ಹಲವರು ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ ಎಂದರು.
ಸಮಾಜವಾದವನ್ನು ಅಳವಡಿಸಿಕೊಂಡಿದ್ದೇನೆ, ಸಾಮಾಜಿಕ ನ್ಯಾಯ ನೀಡುತ್ತೇನೆ ಎಂದು ಕೇವಲ ಬಾಯಿ ಮಾತಲ್ಲಿ ಹೇಳುವ ಸಿದ್ದರಾಮಯ್ಯ ಸಿಎಂ ರೇಸ್ ನಲ್ಲಿದ್ದಾರೆ. ಪಕ್ಷದಲ್ಲಿ ವ್ಯಕ್ತಿ ಪೂಜೆ ಮಾಡಬಾರದು ಎನ್ನುವ ಡಿಕೆಶಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದಂತಹ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರ ಮೂಲಕ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ. ದಲಿತ ಮುಖ್ಯಮಂತ್ರಿ ಎಂದು ಹೇಳುವ ಪರಮೇಶ್ವರ್ ನಾನೇ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ. ಇನ್ನು ತನ್ವೀರ್ ಸೇಠ್ ಅಲ್ಪ ಸಂಖ್ಯಾತರಿಂದ ನಾನೇ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಕಾಂಗ್ರೆಸ್ ನವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಜನರಿಂದ ತಿರಸ್ಕಾರಗೊಂಡ ಬಳಿಕ ಸುಮ್ಮನಿರಬೇಕಿತ್ತು. ಧರ್ಮವನ್ನು ಹಾಳು ಮಾಡುವ ಕಾಂಗ್ರೆಸ್ ನವರನ್ನು ಜನರೇ ತಿರಸ್ಕರಿಸಿ ಹೊರಗಿಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇನ್ನು ಅಧಿಕಾರದಲ್ಲಿದೆ. ಬಿಜೆಪಿ ಅಧಿಕಾರದಲ್ಲಿ ಇರುವಾಗಲೇ ತಾವು ಮುಖ್ಯಮಂತ್ರಿ ಎಂದು ಕಾಂಗ್ರೆಸ್ ನವರು ಬಡಿದಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ವ್ಯಂಗ ಮಾಡಿದರು. ಇದನ್ನೂ ಓದಿ:ಮೂರು ತಿಂಗಳೊಳಗೆ ಶೇ.80 ಜನರಿಗೆ ಕೋವಿಡ್ ಲಸಿಕೆ ಹಾಕಿಸಿ- ಡಿ.ಕೆ.ಶಿವಕುಮಾರ್ ಒತ್ತಾಯ