ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ನೀಗಿಸಲು ಮುಂದಿನ ವಾರ ದೆಹಲಿಗೆ ತೆರಳಿ ಕೇಂದ್ರ ಆರೋಗ್ಯ ಸಚಿವರನ್ನ ಭೇಟಿ ಮಾಡುತ್ತೇನೆ. ಲಸಿಕೆ ಹೆಚ್ಚಾಗಿ ನೀಡಲು ಮನವಿ ಮಾಡುತ್ತೇನೆ ಎಂದು ಹೇಳುವ ಮೂಲಕ ಲಸಿಕೆ ಕೊರತೆಯನ್ನ ಆರೋಗ್ಯ ಸಚಿವ ಸುಧಾಕರ್ ಒಪ್ಪಿಕೊಂಡರು.
ರಾಜ್ಯದಲ್ಲಿ ಲಸಿಕೆ ಕೊರತೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಲಸಿಕೆ ಬರುತ್ತಿದೆ. ಈ ತಿಂಗಳು ಹೆಚ್ಚಾಗಿ ಲಸಿಕೆ ಬರಬೇಕಿತ್ತು. ಆದ್ರೆ ಲಸಿಕೆ ಬರೋದು ತಡವಾಗಿದೆ. ಲಸಿಕೆ ಪೂರೈಕೆ ಹೆಚ್ಚಳ ಮಾಡುವಂತೆ ಮನವಿ ಮಾಡಲು ಸೋಮವಾರ ಅಥವಾ ಮಂಗಳವಾರ ದೆಹಲಿಗೆ ತೆರಳುತ್ತೇನೆ. ಕೇಂದ್ರ ಆರೋಗ್ಯ ಸಚಿವರನ್ನ ಭೇಟಿಯಾಗಿ ರಾಜ್ಯಕ್ಕೆ ಹೆಚ್ಚು ಲಸಿಕೆ ಪೂರೈಕೆ ಮಾಡುವಂತೆ ಮನವಿ ಮಾಡುತ್ತೇನೆ ಅಂತ ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ನಲ್ಲಿ ಶುರುವಾಗಿರೋ ಸಿಎಂ ಮತ್ತು ದಲಿತ ಸಿಎಂ ಕಿತ್ತಾಟದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು ಸುಧಾಕರ್, ಕಾಂಗ್ರೆಸ್ ನ ಆತಂರಿಕ ವಿಷಯದ ಬಗ್ಗೆ ನಾನು ಮಾತಾಡಲ್ಲ. ಸಾಮಾನ್ಯ ಪದ್ದತಿಯಲ್ಲಿ ಕಾಂಗ್ರೆಸ್ ನಲ್ಲಿ ಪಕ್ಷದ ಅಧ್ಯಕ್ಷರು ಅಥವಾ ಸಿಎಲ್‍ಪಿ ಲೀಡರ್ ಗಳು ಸಿಎಂ ಆಗ್ತಾರೆ. ಇವೆರೆಡು ಪ್ರತೀತಿ ಕಾಂಗ್ರೆಸ್ ನಲ್ಲಿ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ನಲ್ಲಿ ನಡೆದುಕೊಂಡ ಬಂದಿರೋ ಪದ್ಧತಿ ಇದಾಗಿದೆ ಅಂತ ಹೇಳಿದರು.
ಕೊಡಗು ಮತ್ತು ಮೈಸೂರಿನಲ್ಲಿ ಕೋವಿಡ್ ಕೇಸ್ ಹೆಚ್ಚಳ ಇದೆ. ಹೀಗಾಗಿ ಇಂದು ಆ ಜಿಲ್ಲೆಗಳಿಗೆ ಪ್ರವಾಸ ಹೋಗ್ತಿದ್ದೇನೆ. ಕೊರೊನಾ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತೆ ಎಂದು ಸಚಿವರು ಮಾಹಿತಿ ನೀಡಿದರು.