– ಉಡುಪಿಯಲ್ಲಿ ಅತಿ ಹೆಚ್ಚು 92 ಪ್ರಕರಣ
– ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4320ಕ್ಕೇರಿಕೆ
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸ 257 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಇಂದಿನ ವರದಿಯ ಅನ್ವಯ ಉಡುಪಿಯಲ್ಲಿ ಅತಿ ಹೆಚ್ಚು 92 ಪ್ರಕರಣಗಳು ಪತ್ತೆಯಾಗಿದ್ದು, ರಾಯಚೂರಿನಲ್ಲಿ 88 ಪ್ರಕರಣಗಳು ದೃಢವಾಗಿದೆ. ಬೆಂಗಳೂರಿನಲ್ಲಿ 9, ಮಂಡ್ಯ, ಹಾಸನದಲ್ಲಿ ತಲಾ 15, ದಕ್ಷಿಣ ಕನ್ನಡದಲ್ಲಿ 04, ಬೆಳಗಾವಿ 12, ದಾವಣಗೆರೆ 13, ಚಿಕ್ಕಬಳ್ಳಾಪುರ ಮತ್ತು ಗದಗ ಜಿಲ್ಲೆಯಲ್ಲಿ ತಲಾ 2, ವಿಜಯಪುರ, ಬಳ್ಳಾರಿ, ಹಾವೇರಿ, ಮೈಸೂರು, ತುಮಕೂರಿನಲ್ಲಿ ತಲಾ ಒಂದು ಕೋವಿಡ್-19 ಪ್ರಕರಣ ದಾಖಲಾಗಿದೆ. ಇದರಲ್ಲಿ 155 ಪಾಸಿಟಿವ್ ಪ್ರಕರಣಗಳು ಅಂತರರಾಜ್ಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದೆ.
ಇಂದು ರಾಜ್ಯದಲ್ಲಿ 106 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ ಕೊರೊನಾದಿಂದ ಚೇತರಿಸಿಕೊಂಡಿರುವವರ ಸಂಖ್ಯೆ 1610ಕ್ಕೇರಿದೆ. ನಿನ್ನೆ ಸಂಜೆ ಗದಗ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದ ಕೊರೊನಾ ಪಾಸಿಟವ್ ಪ್ರಕರಣ ಸೇರಿ 4 ಜನ ಇಂದು ಸಾವನ್ನಪಿದ್ದಾರೆ. ಇದರೊಂದಿಗೆ ಕೊರೊನಾದಿಂದ ಮೃತರಾದವರ ಸಂಖ್ಯೆ ರಾಜ್ಯದಲ್ಲಿ 57ಕ್ಕೇರಿದೆ. ಕೊರೊನಾ ಅಲ್ಲದ ಪ್ರಕರಣದಲ್ಲಿ ಇಂದು ಇಬ್ಬರು ಮೃತ ಪಟ್ಟಿದ್ದಾರೆ. 13 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗದಗ ಜಿಲ್ಲೆಯಲ್ಲಿ ರೋಗಿ ಸಂಖ್ಯೆ 4082, 44 ವರ್ಷದ ಪುರುಷ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಕೊರೊನಾಗೆ 2ನೇ ಬಲಿಯಾಗಿದೆ. ಮೃತ ವ್ಯಕ್ತಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧುಮೇಹ ಮತ್ತು ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದ ಅವರು ಮೇ 27 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಜ್ವರ, ಉಸಿರಾಟ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿ ಜೂನ್ 1 ರಂದು ಕಿಮ್ಸ್ ಗೆ ದಾಖಲಿಸಲಾಗಿತ್ತು. ದಾವಣೆಗೆರೆಯ ರೋಗಿ ಸಂಖ್ಯೆ 4093, 83 ವರ್ಷದ ವೃದ್ಧೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಇವರು ರೋಗಿ-2560ರ ಸಂಪರ್ಕಕ್ಕೆ ಬಂದಿದ್ದರು. ಎದೆ ನೋವಿನಿಂದ ಬಳಲುತ್ತಿದ್ದ ಇವರನ್ನು ಮೇ 31 ರಂದು ದಾವಣಗೆರೆಗೆ ಆಸ್ಪತ್ರೆ ದಾಖಲಿಸಲಾಗಿತ್ತು.
ಬೆಂಗಳೂರು ನಗರದ 65 ವರ್ಷದ ಮಹಿಳೆ ಸಾವನ್ನಪ್ಪಿದ್ದು, ತೀವ್ರ ಜ್ವರ, ನೆಗಡಿಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಚಿಕಿತ್ಸೆ ಫಲಿಸದೆ ನಿನ್ನೆ ಸಾವನ್ನಪ್ಪಿದ್ದರು. ಮತ್ತೊಂದು ಪ್ರಕರಣದಲ್ಲಿ 60 ವರ್ಷದ ಮಹಿಳೆ ನಿನ್ನೆ ಜ್ವರ ಮತ್ತು ವಾಂತಿ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ರಾಗಿಗುಡ್ಡದಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಂದೇ ರೈಲಿನಲ್ಲಿ ಆಗಮಿಸಿದ್ದ ಅಮ್ಮ, ಮಗ, ಮಗಳು ಮತ್ತು ತಂಗಿ ಕ್ವಾರಂಟೈನಲ್ಲಿದ್ದರು. ಆದರೆ ಕೊರೊನಾ ವರದಿ ಬರುವ ಮುನ್ನವೇ ಇವರು ಮನೆಗೆ ಹಿಂದಿರುಗಿದ್ದು, ಆ ಬಳಿಕ ನಾಲ್ಕು ಜನ ಬೆಂಗಳೂರಿನ ನಾಲ್ಕು ಏರಿಯಾಗಳಲ್ಲಿ ವಾಸಿಸುತ್ತಿದ್ದರು. ಮಗಳು ಟ್ಯಾನರಿ ರೋಡ್ ಗಂಡನ ಮನೆಗೆ ತೆರಳಿದ್ದು, ಅಮ್ಮ, ಮಗ ರಾಗಿ ಗುಡ್ಡದ ಮನೆಗೆ ಹಾಗೂ ತಂಗಿ ಪುಟ್ಟೇನಹಳ್ಳಿಯ ಮನೆಗೆ ತೆರಳಿದ್ದರು. ಉಳಿದಂತೆ ಕಲಾಸಿಪಾಳ್ಯದಲ್ಲಿ ಕೊರೊನಾ ಪ್ರಕರಣ ವರದಿಯಾಗಿದ್ದು, 42 ವರ್ಷದ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಿದೆ. ಅಪೆಂಡಿಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಸರ್ಜರಿಗೆ ಎಂದು ಆಸ್ಪತ್ರೆಗೆ ತೆರಳಿದ್ದರು. ಆದರೆ ಸರ್ಜರಿಗೂ ಮುನ್ನ ನಡೆಸಿದ ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ. ಸದ್ಯ ಸೋಂಕಿತನ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯಾಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಉಸಿರಾಟದ ಸಮಸ್ಯೆ ಹೊಂದಿದ್ದ 50 ವರ್ಷದ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಿದೆ. ಹೊರಮಾವುನಲ್ಲಿ ಒಬ್ಬ ವ್ಯಕ್ತಿಗೆ ಪಾಸಿಟಿವ್ ಬಂದಿದ್ದು, ಗದಗ ಪ್ರಯಾಣದ ಹಿನ್ನೆಲೆ ಹೊಂದಿದ್ದರು.