ಬೆಂಗಳೂರು: ಕೇಂದ್ರ ಸರ್ಕಾರ ತಕ್ಷಣವೇ ರಾಜ್ಯಕ್ಕೆ 50 ಸಾವಿರ ಆಂಫೋಟೆರಿಸಿನ್ ಬಿ (Amphotericin B) ಪೂರೈಸುವ ಮೂಲಕ ಕಪ್ಪು ಶಿಲೀಂದ್ರ (Black Fungus) ಸೋಂಕಿನಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ರಾಜ್ಯದ ಜನತೆಯನ್ನು ರಕ್ಷಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿತರ, ಮರಣ ಹೊಂದಿದವರ ಸಂಖ್ಯೆಯಲ್ಲಿ ಸುಳ್ಳು ಹೇಳಿದ ಸರ್ಕಾರ, ಕಪ್ಪು ಶಿಲೀಂದ್ರ ಸೋಂಕಿನಿಂದ ನರಳುತ್ತಿರುವವರ ಮತ್ತು ಸಾವಿಗೀಡಾಗುತ್ತಿರುವವರ ಸಂಖ್ಯೆಯಲ್ಲೂ ಅಸ್ಪಷ್ಟ ಮಾಹಿತಿ ನೀಡುತ್ತಿರುವುದರಿಂದ ರಾಜ್ಯಕ್ಕೆ ಸೂಕ್ತ ಪ್ರಮಾಣದಲ್ಲಿ ಚುಚ್ಚುಮದ್ದು ಹಂಚಿಕೆಯಾಗುತ್ತಿಲ್ಲ. ಇದರಿಂದ ರಾಜ್ಯದಲ್ಲಿ ತೀವ್ರ ಕೊರತೆ ಉಂಟಾಗಿದೆ ಎಂದು ಆಕ್ಷೇಪಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ನಿಂದ ಗುಣವಾದ 2 ಸಾವಿರಕ್ಕೂ ಹೆಚ್ಚು ಜನರಲ್ಲಿ ಕಪ್ಪು ಶಿಲೀಂದ್ರ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ನಿತ್ಯ 4 ರಿಂದ 5 ಆಂಫೋಟೆರಿಸಿನ್ ಬಿ ಚುಚ್ಚುಮದ್ದು ನೀಡಬೇಕಾಗುತ್ತದೆ. ಆದರೆ ರಾಜ್ಯಕ್ಕೆ ಪೂರೈಕೆ ಆಗುತ್ತಿರುವುದು ಕೆಲವೇ ಸಾವಿರ, ಹೀಗಾಗಿ ಸೋಂಕಿತರ ಪಾಡು ಹೇಳತೀರದಾಗಿದೆ ಎಂದರು.
ರಾಜ್ಯದ ಬೀದರ್ ನಿಂದ ಚಾಮರಾಜನಗರದವರೆಗೆ ಎಲ್ಲ ಕಡೆಯೂ ಆಂಫೋಟೆರಿಸಿನ್ ಬಿ ಚುಚ್ಚುಮದ್ದಿನ ತೀವ್ರ ಕೊರತೆ ಎದುರಾಗಿದೆ. ಆದರೂ ಆರೋಗ್ಯ ಇಲಾಖೆ ಇತ್ತ ಗಮನ ಹರಿಸದಿರುವುದು ದುರ್ದೈವ. ಇವರಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಸಂಸತ್ ಸದಸ್ಯರೇ ಕೇಂದ್ರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದರೂ ಸೂಕ್ತ ಪ್ರಮಾಣದಲ್ಲಿ ಔಷಧ ಹಂಚಿಕೆ ಆಗುತ್ತಿಲ್ಲ. 25 ಬಿಜೆಪಿ ಸಂಸದರು ನಾಡಿನ ಜನರ ಜೀವ ಉಳಿಸಲು ಚುಚ್ಚುಮದ್ದು ಕೇಳಲೂ ಬಾಯಿ ಇಲ್ಲದವರಾಗಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ತಕ್ಷಣ ಕನಿಷ್ಠ 50 ಸಾವಿರ ಆಂಫೋಟೆರಿಸಿನ್ ಬಿ ಪೂರೈಸುವ ಮೂಲಕ 2 ಸಾವಿರ ಸೋಂಕಿತರ ಪ್ರಾಣ ಉಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.