ಬೆಂಗಳೂರು: ನೂತನ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ರವರು ಇಂದು ರಾಜ್ಯಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಕಂದಾಯ ಸಚಿವ ಆರ್.ಆಶೋಕ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಬರಮಾಡಿಕೊಂಡರು.
ಇದಕ್ಕೂ ಮುನ್ನ ಮಾತನಾಡಿದ ಸಚಿವ ಆರ್.ಅಶೋಕ್, ನೂತನ ರಾಜ್ಯಪಾಲರನ್ನು ನಾನು ಸಿಎಸ್ ರವಿಕುಮಾರ್ ಸರ್ಕಾರದ ಪರವಾಗಿ ಸ್ವಾಗತಿಸಲು ಬಂದಿದ್ದೇವೆ. ಗೆಹ್ಲೋಟ್ ಅವರು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿರುವುದು ಸಂತೋಷವಾಗಿದೆ. ಈ ಹಿಂದೆಯೇ ರಾಜ್ಯದ ಉಸ್ತುವಾರಿಗಳಾಗಿ ಗೆಹ್ಲೋಟ್ ರವರು ಕೆಲಸ ಮಾಡಿದ್ದಾರೆ. ಕರ್ನಾಟಕದ ಪರಿಚಯ ಮತ್ತು ಇತಿಹಾಸ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದರು.
ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಅನುಭವ ಗೆಹ್ಲೋಟ್ ಅವರಿಗಿದೆ. ತುಳಿತಕ್ಕೆ ಒಳಗಾದ ಸಮುದಾಯದಿಂದ ಬಂದವರಾಗಿದ್ದಾರೆ. ಅವರ ಸಲಹೆ ಸೂಚನೆ ಮತ್ತು ಒಳ್ಳೆಯ ಆಡಳಿತಕ್ಕೆ ಅವರ ಮಾರ್ಗದರ್ಶನ ಅಗತ್ಯವಾಗಿದೆ ಎಂದು ತಿಳಿಸಿದರು. ತಾವರ್ ಚಂದ್ ಗೆಹ್ಲೋಟ್ ಅವರು ನಾಳೆ ಕರ್ನಾಟಕದ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.