ಬೆಂಗಳೂರು: ಪ್ರಬಲ ಖಾತೆಗೆ ಬಿಗಿಪಟ್ಟು ಹಿಡಿದಿದ್ದ ಸಚಿವ ಆನಂದ್ ಸಿಂಗ್ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸಂಜೆ ಸಿಎಂ ಜೊತೆ ನಡೆಸಿದ ಸಂಧಾನ ಸಭೆ ಸಕ್ಸಸ್ ಆಗಿದೆ. ಈ ಹಿಂದೆ ಪ್ರತ್ಯೇಕ ಜಿಲ್ಲೆಗೆ ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಆನಂದ್ ಸಿಂಗ್ ಈಗ ಪ್ರಬಲ ಖಾತೆಗೆ ಪಟ್ಟು ಹಿಡಿದು ರಾಜೀನಾಮೆಯ ದಾಳ ಉರುಳಿಸಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ ಆನಂದ್ ಸಿಂಗ್, ರಾಜೀನಾಮೆ ನೀಡುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಖಾತೆ ಬದಲಾವಣೆ ಆಗಬೇಕೆಂದು ಹೇಳಿದ್ದು ನಿಜ. ಸಿಎಂ ನನ್ನ ಮಾತುಗಳನ್ನ ಕೇಳಿದ್ದು, ಭರವಸೆ ನೀಡಿದ್ದಾರೆ ಎಂದು ಹೇಳಿದರು. ಇತ್ತ ಸಿಎಂ ಮಾತನಾಡಿ, ಖಾತೆಯ ಬದಲಾವಣೆಯ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಆನಂದ್ ಸಿಂಗ್ ಭಾವನೆಗಳಿಗೆ ನಾವು ಸ್ಪಂದಿಸಿದ್ದು, ಅವರ ಮನವಿಯನ್ನು ತಲುಪಿಸಬೇಕಾದವರಿಗೆ ತಲುಪಿಸುತ್ತೇನೆ ಎಂದು ಹೇಳಿದರು.
Advertisement
Advertisement
ಇಂದು ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನವೊಲಿಕೆ ಮಾಡಿದರೂ ಪ್ರವಾಸೋದ್ಯಮ ಮಂತ್ರಿ ಆನಂದ್ ಸಿಂಗ್ ಮನಸ್ಸು ಕರಗಿಲ್ಲ ಎಂದು ತಿಳಿದು ಬಂದಿತ್ತು. ಅವರು ಹಿಡಿದ ಹಠ ಬಿಟ್ಟಿಲ್ಲ. ನಾನೇ ಅಲ್ವಾ ಸರ್? ನಿಮ್ಮನ್ನು ನಂಬಿ ಮೊದಲು ಬಂದವನು. ನೀವು ಸಿಎಂ ಆಗಿದ್ದಾಗ ನೀವು ಹೇಳಿದಂತೆ ಕೇಳಿದೆ. ಆದ್ರೆ ಖಾತೆ ವಿಚಾರದಲ್ಲಿ ನನಗೆ ಈಗ ಅನ್ಯಾಯ ಆಗಿದೆ ಎಂದು ಯಡಿಯೂರಪ್ಪ ಮುಂದೆ ಆನಂದ್ ಸಿಂಗ್ ಹೇಳಿದ್ದಾರೆ ಎನ್ನಲಾಗಿದೆ.
Advertisement
Advertisement
ಸಿಎಂ ಬೊಮ್ಮಾಯಿ ಅವರನ್ನು ಕರೆದು ಮಾತಾಡೋಣ. ನೀವು ದುಡುಕಿನ ತೀರ್ಮಾನ ತಗೋಬೇಡಿ ಎಂದು ಯಡಿಯೂರಪ್ಪ ಕಿವಿಮಾತು ಹೇಳಿದ್ರು ಅಂತಾ ತಿಳಿದುಬಂದಿದೆ. ಆನಂದ್ ಸಿಂಗ್ ಮಾತ್ರ, ನಾನು ಹೇಳಿದ್ದನ್ನು ಕೊಡೋಕೆ ಹೇಳಿ ಸಾರ್. ಇಲ್ಲ ಅಂದ್ರೆ ಶುಕ್ರವಾರ ರಾಜೀನಾಮೆ ಕೊಟ್ಟು ಬಿಡ್ತೀನಿ. ಏನಾದ್ರೂ ಆಗಲಿ ಅಂತಾ ಖಡಕ್ ಆಗಿ ಹೇಳಿದ್ರು ಎನ್ನಲಾಗಿದೆ. ಆಪ್ತ ರಾಜೂಗೌಡ ಬಳಿ ಸಚಿವ ಹಾಗೂ ಶಾಸಕ ಸ್ಥಾನ ಎರಡಕ್ಕೂ ರಾಜೀನಾಮೆ ಕೊಡೋದಾಗಿ ಆನಂದ್ ಸಿಂಗ್ ಹೇಳಿದ್ದಾರೆ ಅಂತ ಗೊತ್ತಾಗಿದೆ.
ಹೊಸಪೇಟೆಯ ಶಾಸಕ ಕಚೇರಿಯ ಬೋರ್ಡ್ ತೆಗೆಸಿ, ಬಾಗಿಲು ಬಂದ್ ಮಾಡಿಸಿದ್ದ ಆನಂದ್ ಸಿಂಗ್ ಸಚಿವ ಸ್ಥಾನದ ಜೊತೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಸುಳಿವು ನೀಡಿದ್ರು. ಈ ಬೆಳವಣಿಗೆ ಬಿಜೆಪಿಯನ್ನು ಕಂಗಾಲು ಮಾಡಿತ್ತು. ರಾತ್ರೋರಾತ್ರಿ ಬಿಎಸ್‍ವೈ ಮನೆಗೆ ತೆರಳಿದ್ದ ಸಿಎಂ ಬೊಮ್ಮಾಯಿ ಚರ್ಚೆ ನಡೆಸಿದ್ದರು. ಹೈಕಮಾಂಡ್‍ಗೂ ಸುದ್ದಿ ಮುಟ್ಟಿಸಿದ್ರು. ಆನಂದ್ ಸಿಂಗ್ ಸಂಪರ್ಕಿಸಲು ಬಿಜೆಪಿಯ ಘಟಾನುಘಟಿಗಳು ಪ್ರಯತ್ನಿಸಿದ್ರೂ ಸಫಲ ಆಗಿರಲಿಲ್ಲ.
ಇಂದು ಬೆಳಗ್ಗೆ ಇಷ್ಟ ದೈವ ವೇಣುಗೋಪಾಲ ಸ್ವಾಮಿ ದೇಗುಲದ ಜೀರ್ಣೋದ್ಧಾರ ಪೂಜೆಯಲ್ಲಿ ಆನಂದ್ ಸಿಂಗ್ ಪಾಲ್ಗೊಂಡರು. ಈ ಸಂದರ್ಭದಲ್ಲಿ ಆನಂದ್ ಸಿಂಗ್ ಫೋನ್ ರಿಂಗಣಿಸುತ್ತಲೇ ಇತ್ತು. ರಾಜೂಗೌಡ ಮೂಲಕ ಆನಂದ್ ಸಿಂಗ್ ಸಂಪರ್ಕ ಸಾಧಿಸಿದ ಬಿಎಸ್‍ವೈ, ಕೂಡಲೇ ಬೆಂಗಳೂರಿಗೆ ಬನ್ನಿ ಮಾತಾಡೋಣ ಎಂಬ ಸಂದೇಶ ರವಾನಿಸಿದ್ದರು. ಸಂಜೆ 4 ಗಂಟೆಗೆ ಆನಂದ್ ಸಿಂಗ್ ಅವರನ್ನು ರಾಜೂಗೌಡ ಹೆಲಿಕಾಪ್ಟರ್ ನಲ್ಲಿ ಬೆಂಗಳೂರಿಗೆ ಕರೆತಂದ್ರು. ಇದಕ್ಕೂ ಮುನ್ನ ಹೊಸಪೇಟೆಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಮಂತ್ರಿ ಆನಂದ್ ಸಿಂಗ್, ವೇದಾಂತಿಯಾದ್ರು. ಈ ದೇಗುಲದಲ್ಲೇ ನನ್ನ ರಾಜಕೀಯ ಆರಂಭವಾಗಿತ್ತು. ನಿಗೂಢವಾಗಿ ಮಾತಾಡಿದ್ರು. ಬಿಎಸ್‍ವೈ ಇದ್ದಾಗ ನನಗೆ ಹೀಗೆಲ್ಲಾ ಆಗಿರಲಿಲ್ಲ. ನನ್ನ ಬೆಂಬಲಕ್ಕೆ ಯಾರು ಇಲ್ಲ. ಆ ಶ್ರೀಕೃಷ್ಣ ಪರಮಾತ್ಮಾನೇ ಮುಂದೆಯೂ ಕಾಪಾಡ್ತಾನೆ. ನನಗೆ ಬೇರೆಯವರಂತೆ ನಾಟಕ ಆಡಿ ಗೊತ್ತಿಲ್ಲ ಅಂತಾ ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು. ಇದನ್ನೂ ಓದಿ: ನಾನು ಹಠವಾದಿ, ಅಂದುಕೊಂಡಿದ್ದನ್ನ ಸಾಧಿಸದೇ ಬಿಡಲ್ಲ: ಸಚಿವ ಆನಂದ್ ಸಿಂಗ್