ಬೆಂಗಳೂರು: ಸಂಪುಟ ಪುನರ್ ರಚನೆಯ ಅಸಮಾಧಾನ ತಣ್ಣಾಗದ ಬೆನ್ನಲ್ಲೇ ಬಿಜೆಪಿ ನಿಷ್ಠರೇ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಸೋಮವಾರ ಭೋಜನಕೂಟದ ನೆಪದಲ್ಲಿ 15 ಶಾಸಕರು ಒಂದೆಡೆ ಸೇರಿ ಪ್ರತ್ಯೇಕ ಸಭೆ ನಡೆಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಶಾಸಕ ಸುನಿಲ್ ಕುಮಾರ್, ಸಿದ್ದು ಸವದಿ, ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್, ನಾಗೇಶ್ ಸೇರಿದಂತೆ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗದ 15 ಕ್ಕೂ ಹೆಚ್ಚು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಿಎಂ ಯಡಿಯೂರಪ್ಪನವರ ನಡೆಯ ಬಗ್ಗೆ ಹೈಕಮಾಂಡ್ ಗೆ ದೂರು ನೀಡುವ ಕುರಿತು ಚರ್ಚೆ ನಡೆಸಲಾಗಿದೆ. ಸರ್ಕಾರ ಹೇಗೆ ನಡೆಯಬೇಕು? ಹೇಗಿರಬಾರದು ಎಂಬ ಬಗ್ಗೆ ಪಂಚಸೂತ್ರ ಸೂತ್ರ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.
ಬಿಎಸ್‍ವೈ ಆಡಳಿತಕ್ಕೆ ನಿಷ್ಠರ ಪಂಚಸೂತ್ರ..!
1. ಯಡಿಯೂರಪ್ಪ ಅಥವಾ ವಿಜಯೇಂದ್ರ ಕೇಂದ್ರಿತ ಸರ್ಕಾರ ಆಗಬಾರದು, ಬಿಜೆಪಿ ಸರ್ಕಾರ ಆಗಿರಬೇಕು.
2. ಬಿಎಸ್‍ವೈ ಕುಟುಂಬದ ಪ್ರತಿ ಸದಸ್ಯರನ್ನು ಆಡಳಿತ, ಸರ್ಕಾರದ ನಿರ್ಧಾರಗಳಿಂದ ದೂರ ಇಡಬೇಕು.
3. ಜಾತಿ ಕೇಂದ್ರೀತ ಸರ್ಕಾರ ಎಂದು ಬಿಂಬಿಸಿಕೊಳ್ಳದೇ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಂತಾಗಬೇಕು.
4. ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸರ್ಕಾರದ ಸೌಲಭ್ಯ, ಅನುಕೂಲ ಸಿಗುವಂತೆ ನೋಡಿಕೊಳ್ಳಬೇಕು.
5. ಸರ್ಕಾರ ಪರ್ಸೆಂಟೇಜ್ ಹಾವಳಿಗೆ ಬ್ರೇಕ್ ಹಾಕಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು.
ಪಕ್ಷ ನಿಷ್ಠರ ಸಭೆಯಲ್ಲಿ ಏನೆಲ್ಲ ಚರ್ಚೆ ಆಯ್ತು?: ಸರ್ಕಾರದಲ್ಲಿ ಮೂಲ ಬಿಜೆಪಿ ಶಾಸಕರ ಕಡೆಗಣನೆಗೆ ಆಕ್ರೋಶ ವ್ಯಕ್ತವಾಗಿದ್ದು, ಪಕ್ಷ ನಿಷ್ಠರು ಪಕ್ಷ ಕಟ್ಟಲು ಮಾತ್ರನಾ ಇರೋದು. ಕ್ಷೇತ್ರಗಳ ಅಭಿವೃದ್ಧಿ ಆಗುತ್ತಿಲ್ಲ. ಜನರ ಬಾಯಿಗೆ ಶಾಸಕರು ಆಹಾರ ಆಗ್ತಿದ್ದಾರೆ. ಶಾಸಕರು ಟಿಎ/ಡಿಎ ಪಡೆಯಲು ಮಾತ್ರನಾ ಇರೋದು ಅನ್ನೋ ಪರಿಸ್ಥಿತಿ ಬಂದಿದೆ. ಪಕ್ಷನಿಷ್ಠರ ಕ್ಷೇತ್ರಗಳಿಗೆ ಅನುದಾನ ಸಿಕ್ತಿಲ್ಲ ಎಂದು ಕೆಲ ಶಾಸಕರು ಆಕ್ರೋಶ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.
ನಾವು ಅನುದಾನ ಕೇಳಿದ್ರೆ ನಯಾ ಪೈಸೆ ಸಿಗಲ್ಲ. ಅನುದಾನವೂ ಕೊಡಲ್ಲ, ಸ್ಥಾನಮಾನವೂ ಕೊಟ್ಟಿಲ್ಲ. ಸರ್ಕಾರದ ವ್ಯವಸ್ಥೆ ಸರಿಯಿಲ್ಲ. ಆಡಳಿತ ಟ್ರ್ಯಾಕ್ ಗೆ ಬರಬೇಕಂದ್ರೆ ಈ ಲೋಪಗಳು ಸರಿಯಾಗಬೇಕು. ಅಧಿಕಾರಿಗಳ ವರ್ಗಾವಣೆಯಲ್ಲೂ ಶಾಸಕರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ಮೋದಿ ಮಾದರಿ ಆಡಳಿತ ರಾಜ್ಯ ಸರ್ಕಾರದಲ್ಲಿ ಆಗುತ್ತಿಲ್ಲ. ಸೈದ್ಧಾಂತಿಕ ನಿಲುವು ಸರ್ಕಾರದ ಆಡಳಿತದಲ್ಲಿ ಪ್ರತಿಫಲಿಸಬೇಕು. ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ. ನಿಗಮ-ಮಂಡಳಿಗಳಿಗೆ ಕಾರ್ಯಕರ್ತರಿಗೆ ಅವಕಾಶವೇ ಇಲ್ಲ ಎಂದು ಶಾಸಕರು ತಮ್ಮ ಅಸಮಾಧನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಹಿರಿಯರ ನಿರಂತರ ಕಡೆಗಣೆನೆ ಆಗುತ್ತಿದೆ. 2023ರ ಚುನಾವಣೆ ವೇಳೆಗೆ ಎರಡನೇ ಹಂತದ ನಾಯಕರ ಬೆಳವಣಿಗೆ ಆಗಬೇಕು. ಈ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತರಬೇಕು. ಇನ್ನೊಂದು ಸುತ್ತಿನ ಸಭೆ ಬಳಿಕ ವರಿಷ್ಠರ ಗಮನ ಸೆಳೆಯುವ ಬಗ್ಗೆ ತೀರ್ಮಾನಿಸಲಾಗಿದೆ ಎನ್ನಲಾಗಿದೆ.