ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಶುಕ್ರವಾರ ಸಂಕಟ ತಂದೊಡ್ಡಲಿದೆಯಾ ಅನ್ನೋ ಚರ್ಚೆಗಳು ಕೇಸರಿ ಮನೆಯಲ್ಲಿ ಆರಂಭಗೊಂಡಿವೆ. ಶುಕ್ರವಾರ ಬಿಜೆಪಿ ನಿಷ್ಠರ ನಡೆ ಏನು ಅನ್ನೋದರ ಬಗ್ಗೆ ಪ್ರಶ್ನೆಯೊಂದು ಗಿರಕಿ ಹೊಡೆಯುತ್ತಿದೆ.
ಈಗಾಗಲೇ ಸಿಎಂ ನಡೆ, ಏಕಪಕ್ಷೀಯ ನಿರ್ಧಾರ ಮತ್ತು ಆಡಳಿತದ ಬಗ್ಗೆ ಬೇಸರ ವ್ಯಕಪ್ತಪಡಿಸಿರುವ ಸುಮಾರು 15ಕ್ಕೂ ಶಾಸಕರು ಸೋಮವಾರ ಊಟದ ನೆಪದಲ್ಲಿ ಒಂದೆಡೆ ಸೇರಿ ಸಭೆ ನಡೆಸಿದ್ದರು. ಕಲಾಪ ಮುಗಿದ ಬಳಿಕ ಅಂದ್ರೆ ಶುಕ್ರವಾರ ಸಭೆ ಸೇರುವ ಬಗ್ಗೆ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಇದೀಗ ನಾಳೆ 15ಕ್ಕೂ ಹೆಚ್ಚು ಶಾಸಕರು ವಿಧಾನಸೌಧದ ಸುತ್ತಮುತ್ತವೇ ಮತ್ತೊಮ್ಮೆ ಸಭೆ ಸೇರುವ ಸಾಧ್ಯತೆಗಳು ದಟ್ಟವಾಗಿವೆ.
ಸಭೆಯಲ್ಲಿ ಸಿಎಂ ವಿರುದ್ಧ ಹೈಕಮಾಂಡ್ ಗೆ ದೂರು ಸಲ್ಲಿಸುವ ಕುರಿತು ಚರ್ಚೆಗಳು ನಡೆಸಿ, ಒಮ್ಮತದ ತೀರ್ಮಾನಕ್ಕೆ ನಿಷ್ಠರು ಬರಲಿದ್ದಾರೆ. ಹಾಗಾಗಿ ಶುಕ್ರವಾರ ಸಿಎಂಗೆ ಸಂಕಟ ತಂದೊಡ್ಡುತ್ತಾ ಅಥವಾ ಅಸಮಾಧಾನ ಸ್ಫೋಟಕ್ಕೂ ಮುನ್ನವೇ ಮುಖ್ಯಮಂತ್ರಿಗಳು ಶಮನ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.