ಬೆಂಗಳೂರು: ರಾಜಕೀಯ ಮಾಡುವುದಕ್ಕೆ ಬೇರೆ ರೀತಿಯ ಮಾರ್ಗಗಳಿವೆ. ಸಿಡಿ ವಿಚಾರವಾಗಿ ಮಾತನಾಡುವುದು ನಮಗೆ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ರಾಸಲೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಸಿಡಿ ಬಗ್ಗೆ ಮಾತನಾಡುವುದು ನಮಗೆ ಶೋಭೆ ತರುವುದಿಲ್ಲ. ಇಂತಹ ವಿಷಯ ಇಟ್ಟುಕೊಂಡು ನಾನು ರಾಜಕೀಯ ಮಾಡುವುದಿಲ್ಲ. ರಾಜಕೀಯ ಮಾಡವುದಕ್ಕೆ ಬೇರೆ ಮಾರ್ಗಗಳಿವೆ ಎಂದು ಹೇಳಿದ್ದಾರೆ.
ರಾಜಕೀಯ ವ್ಯಕ್ತಿಗಳ ಇಂತಹ ನಡವಳಿಕೆಗಳಿಂದ ಸಮಾಜದಲ್ಲಿ ಬೆಳವಣಿಗೆ ಬಗ್ಗೆ ಗೊತ್ತಾಗುತ್ತೆ. ನನ್ನ ಸರ್ಕಾರ ತೆಗೆದರು. ಆದರೆ ನನಗೆ ಯಾವುದೇ ಬೇಸರವಿಲ್ಲ. ಈಗ ಯಡಿಯೂರಪ್ಪನವರ ಸರ್ಕಾರ ಇದೆ. ಹಾಗಾಗಿ ಈ ವಿಚಾರವಾಗಿ ಉತ್ತರ ಯಡಿಯೂರಪ್ಪನವರು ನೀಡಬೇಕು. ಬಿಜೆಪಿ ನಾಯಕರಿಂದ ಉತ್ತರ ಪಡೆಯುವುದು ಸೂಕ್ತ ಎಂದರು.
ವಿಶ್ವನಾಥ್‍ರವರು ಕರ್ನಾಟಕದಲ್ಲಿ ರಾಕ್ಷಸಿ ಸರ್ಕಾರ ಇತ್ತು. ರಾಕ್ಷಸಿ ಸರ್ಕಾರ ತೆಗೆಯಲು ನಾವು ಗುಂಪು ಮಾಡಿಕೊಂಡು ಬಾಂಬೆಗೆ ಹೋಗಿ ರಾಮ ರಾಜ್ಯ ತಂದಿದ್ದೇವೆ ಎಂದು ಹೇಳಿದ್ದರು. ಯಾವ ರಾಮ ರಾಜ್ಯ ತಂದಿದ್ದಾರೆ ಎಂದು ಇವರೆಲ್ಲ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಲಿ. ನಾನು ಈ ವಿಚಾರವಾಗಿ ಯಾವುದೇ ರಿಯಾಕ್ಷನ್ ಕೊಡುವುದಿಲ್ಲ ಎಂದು ಹೇಳಿದರು.