– ದೇಶದಲ್ಲಿ ಎಲ್ಲಾ ಕೆಟ್ಟ ಕೆಲಸಗಳಿಗೆ ಕಾಂಗ್ರೆಸ್ಸಿಗರೇ ಪ್ರೇರಣೆ
ಮಂಗಳೂರು: ನಾವು ರಾಜಕೀಯ ಕ್ಷೇತ್ರದಲ್ಲಿ ಇರುವವರು. ನಾವು ಯಾರ ಬಗ್ಗೆಯೂ ಮಾತನಾಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾರ್ಯಕರ್ತನಿಗೆ ಡಿ.ಕೆ ಶಿವಕುಮಾರ್ ಕಪಾಳಮೋಕ್ಷ ಮಾಡಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನಾವು ಏನೇ ಮಾತಾಡಿದ್ರೂ ಸಮಾಜ ನಮ್ಮನ್ನ ಗಮನಿಸುತ್ತಿರುತ್ತದೆ. ಕಾರ್ಯಕರ್ತರು ಮತ್ತು ಜನರು ನಮ್ಮತ್ರ ಬೇಡಿಕೆ, ಇಚ್ಛೆ ಹಾಗೂ ಅಪೇಕ್ಷೆಯನ್ನ ಪಡುತ್ತಾರೆ. ಅವರು ಬಂದಾಗ ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿರೋದು ನಮ್ಮ ಸಂಸ್ಕೃತಿ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ – ಬಿಜೆಪಿ ಟಾಂಗ್
ಯಾರೇ ರಾಜಕಾರಣಿ ಆದ್ರೂ ಎಲ್ಲೆಮೀರಿ ವರ್ತಿಸಬಾರದು, ಇದು ಸರಿಯಾದ ನಡತೆ ಅಲ್ಲ. ಕಾಂಗ್ರೆಸ್ಸಿಗರ ಸಂಸ್ಕೃತಿ ಏನು ಅನ್ನೋದು ಇದರಿಂದ ಗೊತ್ತಾಗುತ್ತೆ. ಕಾಂಗ್ರೆಸ್ಸಿಗರು ಹಲ್ಲೆ ಮಾಡ್ತಾ ಇರೋದು ಇದು ಮೊದಲಲ್ಲ. ವಿಧಾನಸೌಧದ ಒಳಗೆ ಸಿದ್ದರಾಮಯ್ಯ ತೊಡೆತಟ್ಟಿ, ಯುದ್ದಕ್ಕೆ ಕರೆದು ಒಳಹೊಕ್ಕಿದವರು. ದೇವಸ್ಥಾನದ ಹಾಗಿರೋ ವಿಧಾನಸೌಧಕ್ಕೆ ಅಗೌರವ ತೋರಿದವರು ಕಾರ್ಯಕರ್ತರಿಗೆ ಗೌರವ ತೋರಿಸ್ತಾರಾ? ಕಾಂಗ್ರೆಸ್ ರೌಡಿಗಳ ಪಕ್ಷ ಅಲ್ಲ ಅಂತ ಯಾರೂ ಹೇಳಲ್ಲ, ಅವರ ವ್ಯಕ್ತಿತ್ವದಲ್ಲೇ ಅದು ಕಾಣುತ್ತದೆ. ಅವರ ಇತಿಹಾಸ ತೆಗೆದು ನೋಡಿ, ರೌಡಿ ಮಾತ್ರವಲ್ಲ, ಈ ದೇಶದಲ್ಲಿ ಎಲ್ಲಾ ಕೆಟ್ಟ ಕೆಲಸಗಳಿಗೆ ಪ್ರೇರಣೆ ಅವರೇ ಎಂದು ಕಟೀಲ್ ಕಿಡಿಕಾರಿದ್ದಾರೆ.
ಆಗಿದ್ದೇನು..?
ಕೆ.ಎಂ ದೊಡ್ಡಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದ ಜಿ. ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಡಿಕೆಶಿ ಬಂದಿದ್ದರು. ಈ ವೇಳೆ ಆಸ್ಪತ್ರೆಯ ಒಳಗಡೆಗೆ ಬರುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಡಿಕೆಶಿ ಹೆಗಲ ಮೇಲೆ ಕೈ ಹಾಕಲು ಪ್ರಯತ್ನಿಸಿದರು. ಕೂಡಲೇ ಕಾರ್ಯಕರ್ತನ ತಲೆಯ ಮೇಲೆ ಪಟಾರ್ ಎಂದು ಡಿಕೆ ಶಿವಕುಮಾರ್ ಹೊಡೆದಿದ್ದರು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ, ಡಿಕೆಶಿ ವಿರುದ್ಧ ಟೀಕೆ ಆರಂಭಿಸಿದೆ. ಇದೀಗ ಟ್ವೀಟ್ ಗುದ್ದು ಕೊಡಲು ಮುಂದಾಗಿತ್ತು.