ಹಾಸನ: ರಾಜಕಾರಣಿಗಳ ಇಂತಹ ಪ್ರಕರಣಗಳು ರಾಜಕೀಯ ವಲಯದಲ್ಲಿ ತಲೆ ತಗ್ಗಿಸುವಂತಹವು, ಅವರು ಭಾಗಿ ಆಗಿರಲಿ, ಬಿಡಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು, ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ.
ಸಚಿವ ಜಾರಕಿಹೊಳಿ ಸಿಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಮೇಶ್ ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಜಾ ಮಾಡಬೇಕಾಗುತ್ತದೆ. ತನಿಖೆ ನಂತರ ಈ ವೀಡಿಯೋದ ನೈಜತೆ ತಿಳಿಯುತ್ತದೆ. ತಪ್ಪಿಲ್ಲದಿದ್ದರೆ ಜಾರಕಿಹೊಳಿ ಮಂತ್ರಿಯಾಗಿ ಮುಂದುವರಿಯಲಿ. ಹಿಂದೆಯೂ ಕೂಡ ಇಂತಹ ಘಟನೆಗಳು ನಡೆದಿದ್ದು ಆಗಲೂ ರಾಜೀನಾಮೆ ನೀಡಿದ್ದಾರೆ ಎಂದರು.
ಬಿಜೆಪಿ ಪಕ್ಷ ಒಂದು ಶಿಸ್ತಿನ ಪಕ್ಷವಾಗಿದೆ. ಆದರೆ ಪದೇ ಪದೇ ಇಂತಹ ಪ್ರಕರಣಗಳು ಪಕ್ಷದಲ್ಲಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜಕಾರಣಿಗಳು ಸಾರ್ವಜನಿಕ ಜೀವನದಲ್ಲಿ ಶಿಸ್ತಿನಿಂದ ಇರಬೇಕು. ಇದು ಅಕ್ಷಮ್ಯ ಅಪರಾಧವಾಗಿದೆ. ಬಿಜೆಪಿ ಪಕ್ಷದ ಕೆಲ ಮುಖಂಡರು ಸಿಡಿ ಬಗ್ಗೆ ಮೊದಲೇ ಸುಳಿವು ನೀಡಿದ್ದು, ಇಂತಹದ್ದೇ ವಿಚಾರದ ಸಿಡಿ ಎಂದು ಈಗ ತಿಳಿಯುತ್ತಿದೆ. ಇಂತಹ ವೀಡಿಯೋಗಳಿಂದ ಸಾರ್ವಜನಿಕರಿಗೆ ಹೇಸಿಗೆ ಬಂದಿದೆ. ಇಂತಹ ಘಟನೆಗಳನ್ನು ನಮ್ಮ ಪಕ್ಷದ ವತಿಯಿಂದ ಖಂಡಿಸುತ್ತೇವೆ. ನಾಳೆಯಿಂದ ಸದನ ಆರಂಭವಾಗಲಿದ್ದು, ಅಲ್ಲಿಯೂ ಕೂಡ ಸಿಡಿ ವಿವಾದವನ್ನು ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು.