– ಖುರ್ಚಿ ಉಳಿಸಿಕೊಳ್ಳಲು ದೆಹಲಿಗೆ ಹೋದ್ರಾ ಸಿಎಂ?
– ಮೂವರು ಶಾಸಕರನ್ನು ಗುರುತಿಸಿದ ಹೈಕಮಾಂಡ್
ನವದೆಹಲಿ: ಕೊರೋನಾ, ಡ್ರಗ್ಸ್ ಕೇಸ್ ಮಧ್ಯೆ, ರಾಜ್ಯ ರಾಜಕೀಯ ತಿರುವುಗಳ ಮೇಲೆ ತಿರುವು ಪಡೆಯುವ ಲಕ್ಷಣಗಳು ಕಾಣಿಸುತ್ತಿವೆ. ಬಹಳ ದಿನಗಳ ನಂತರ ಸಿಎಂ ಯಡಿಯೂರಪ್ಪ ದೆಹಲಿ ಯಾತ್ರೆ ಕೈಗೊಂಡಿದ್ದಾರೆ.
ಸಿಎಂ ಯಡಿಯೂರಪ್ಪ ದೆಹಲಿ ಹೋಗಿರುವುದು ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವುದಕ್ಕೆ ಎಂದು ಸಂಪುಟ ಆಕಾಂಕ್ಷಿಗಳು, ಬಿಜೆಪಿಯಲ್ಲಿ ಕೆಲವರು ಭಾವಿಸಿದ್ದಾರೆ. ಆದರೆ ಯಡಿಯೂರಪ್ಪ ದೆಹಲಿಗೆ ಹೋಗಲು ಬೇರೆಯದ್ದೇ ಕಾರಣವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶೀಘ್ರವೇ ಸಂಪುಟ ಪುನಾರಚನೆ ಮಾತ್ರವಲ್ಲ. ಮುಖ್ಯಮಂತ್ರಿಯೂ ಬದಲಾದರೂ ಅಚ್ಚರಿ ಇಲ್ಲ ಎಂಬ ಮಾತು ಕೇಳಿಬರುತ್ತಿವೆ.
ಕಳೆದ ಒಂದು ವರ್ಷದಿಂದ ಯಡಿಯೂರಪ್ಪ ಉತ್ತರಾಧಿಕಾರಿಯ ಬೇಟೆಯಲ್ಲಿ ತೊಡಗಿರುವ ಹೈಕಮಾಂಡ್, ಈಗಾಗಲೇ ಲಿಂಗಾಯತ ಸಮುದಾಯದ ಮೂವರು ಶಾಸಕರನ್ನು ಗುರುತಿಸಿದೆ. ಅಳೆದು ತೂಗಿ ಇದರಲ್ಲಿ ಒಂದು ಹೆಸರನ್ನು ಫೈನಲ್ ಮಾಡುವುದು ಮಾತ್ರ ಬಾಕಿಯಿದೆ ಎನ್ನಲಾಗುತ್ತಿದೆ.
ಈ ವಿಚಾರ ತಿಳಿದೇ ಸಿಎಂ ಯಡಿಯೂರಪ್ಪ ತರಾತುರಿಯಲ್ಲಿ ದೆಹಲಿ ಯಾತ್ರೆ ಕೈಗೊಂಡಿದ್ದು, ತಮ್ಮ ಖುರ್ಚಿ ಉಳಿಸಿಕೊಳ್ಳುವ ಕಸರತ್ತನ್ನು ಆರಂಭಿಸಿದ್ದಾರೆ. ಆದರೆ ಆ ಮೂವರಲ್ಲಿ ಯಾರು ಬೆಸ್ಟ್ ಅಂತಾ ನಿಮ್ಮ ಅಭಿಪ್ರಾಯ ಹೇಳಿ ಎಂದು ಕೇಳಲು ಹೈಕಮಾಂಡ್ ಮುಂದಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಈ ಬಾರಿಯ ದೆಹಲಿ ಯಾತ್ರೆಯಲ್ಲಿ, ಎದುರಾಳಿಗಳನ್ನು ಹತ್ತಿಕ್ಕುವಲ್ಲಿ ಯಡಿಯೂರಪ್ಪ ಯಶಸ್ವಿಯಾಗುತ್ತಾರೋ ಅಥವಾ ಫೇಲ್ ಆಗುತ್ತಾರೋ ಎಂಬ ಕುತೂಹಲ ಮನೆ ಮಾಡಿದೆ.
ಬಿಎಸ್‍ವೈ ಉತ್ತರಾಧಿಕಾರಿ ಯಾರು?
ಬಿಜೆಪಿಯಲ್ಲಿ 75 ವರ್ಷ ಮೀರಿದವರಿಗೆ ಅಧಿಕಾರವಿಲ್ಲ ಎಂಬ ಗೆರೆಯನ್ನು ಈಗಾಗಲೇ ಹಾಕಲಾಗಿದೆ. ಯಡಿಯೂರಪ್ಪನವರಿಗೆ ಈಗ 77 ವರ್ಷ. ಹೀಗಾಗಿ ಪಕ್ಷದ ಭವಿಷ್ಯದ ದೃಷ್ಟಿಯಿಂದ ಶೀಘ್ರ ಉತ್ತರಾಧಿಕಾರಿ ನೇಮಕಕ್ಕೆ ಹೈಕಮಾಂಡ್ ತಯಾರಿ ನಡೆಸುತ್ತಿದೆ.
ಬಿಎಸ್‍ವೈ ಸ್ಥಾನದಲ್ಲಿ ಲಿಂಗಾಯತರನ್ನೇ ಕೂರಿಸಲು ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ. ಈ ಸಂಬಂಧವಾಗಿ ಉತ್ತರ ಕರ್ನಾಟಕದ ಮೂವರು ಶಾಸಕರನ್ನ ಗುರುತಿಸಿದೆ. `ಆ’ ಮೂವರು ಲಿಂಗಾಯತ ಶಾಸಕರ ಸಂಪರ್ಕ, ಪಕ್ಷದಲ್ಲಿ ಮಾಡಿರುವ ಕೆಲಸ ಸೇರಿದಂತೆ ಸಂಪೂರ್ಣ ಜಾತಕವನ್ನು ಹೈಕಮಾಂಡ್ ಕಲೆಹಾಕುತ್ತಿದೆ.
`ಆ’ ಮೂವರು ಶಾಸಕರ ವಯಸ್ಸು 51 ರಿಂದ 56 ವರ್ಷವಾಗಿದ್ದು ಮೂವರು ಶಾಸಕರಿಗೂ ಮಾಸ್ ಇಮೇಜ್ ಇಲ್ಲ. ಆದರೆ ಅಚ್ಚರಿ ಎಂಬಂತೆ ಮೂವರ ಪಟ್ಟಿಯನ್ನು ಹೈಕಮಾಂಡ್ ಸಿದ್ಧಪಡಿಸಿದೆ. ಬಿಎಸ್‍ವೈ ಬಳಿ ಈ ಬಗ್ಗೆ ಪ್ರಸ್ತಾಪಿಸಿ ಅಭಿಪ್ರಾಯ ಪಡೆಯಲು ಹೈಕಮಾಂಡ್ ಪ್ಲಾನ್ ಮಾಡಿದ್ದರೆ ಇನ್ನೊಂದಿಷ್ಟು ದಿನ ನನಗೆ ಟೈಮ್ ಕೊಡಿ ಎಂದು ಕೇಳಲು ಸಿಎಂ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.