– ವೀಡಿಯೋ ಮಾಡಿ ಹರಿಬಿಟ್ಟಿದ್ದ ತಂದೆ-ಮಗಳು
– ಗ್ರಾಮಸ್ಥರಿಂದ ಬಾಲಕಿಯ ಕಾರ್ಯಕ್ಕೆ ಮೆಚ್ಚುಗೆ
ಡೆಹ್ರಾಡೂನ್: ದೇಶದಲ್ಲಿ ಹೊಂಡ ಗುಂಡಿಗಳಿಂದ ರಸ್ತೆಗಳು ಕಂಡು ಬರುವುದು ಸಾಮಾನ್ಯ. ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸುವುದರಿಂದ ನಿರ್ಮಾಣವಾದ ಕೆಲವೇ ಗಂಟೆಗಳಲ್ಲಿ ರಸ್ತೆಯಲ್ಲಿ ಡಾಂಬರ್ ಎದ್ದು ಬರುವುದು ಅಪರೂಪವೇನಲ್ಲ. ಆದರೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬಾಲಕಿಯೊಬ್ಬಳ ಖಡಕ್ ಗ್ರೌಂಡ್ ರಿಪೋರ್ಟ್ ನಿಂದಾಗಿ ಎಚ್ಚೆತ್ತು ಕೂಡಲೇ ರಸ್ತೆ ರಿಪೇರಿ ಮಾಡಿಸಿದ ಘಟನೆ ನಡೆದಿದೆ.
ಚಾಮೋಲಿ ಜಿಲ್ಲೆಯ ದೇವರ್ಖಡೋರ ಗ್ರಾಮದ 15 ವರ್ಷದ ಸುಹಾನಿ ಬಿಸ್ತ್ ವರದಿ ಮಾಡಿರುವ ಬಾಲಕಿ. ಈಕೆ ಹೊಂಡ- ಗುಂಡಿಗಳಿಂದ ಕೂಡಿದ್ದ ರಸ್ತೆಯಿಂದ ಬೇಸತ್ತು ಖುದ್ದು ತಾನೇ ವರದಿ ಮಾಡಿ ಅಧಿಕಾರಿಯ ಚಳಿ ಬಿಡಿಸಿದ್ದಾಳೆ. ಅಲ್ಲದೆ ಈ ಮೂಲಕ ರಸ್ತೆ ರಿಪೇರಿ ಮಾಡಿಸಿ ಮಾದರಿಯಾಗಿದ್ದಾಳೆ.
ಗ್ರಾಮದಲ್ಲಿ 10 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಈ ರಸ್ತೆ ನಿರ್ಮಾಣಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರಿಂದ ಕೆಲವೇ ದಿನಗಳಲ್ಲಿ ರಸ್ತೆ ತುಂಬಾ ಹೊಂಡ-ಗುಂಡಿಗಳು ಬಿದ್ದಿದ್ದವು. ಇದರಿಂದ ಬೇಸತ್ತ ಬಾಲಕಿ ತಾನೇ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾಳೆ. ಭ್ರಷ್ಟಾಚಾರವನ್ನು ಬಹಿರಂಗಪಡಿಸುವ ಬಾಲಕಿಯ ಗ್ರೌಂಡ್ ರಿಪೋರ್ಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಅಲ್ಲದೆ ಜಿಲ್ಲಾಡಳಿತದ ಗಮನಕ್ಕೆ ಬಂದ 24 ಗಂಟೆಯೊಳಗೆ ರಸ್ತೆ ರಿಪೇರಿ ಮಾಡಲು ಮುಂದಾಗಿದೆ.
ಗೋಪೇಶ್ವರದಿಂದ ಘಿಗ್ರಾನ್ ಗ್ರಾಮಕ್ಕೆ ತೆರಳುವ ರಸ್ತೆಗಳು ಕೆಟ್ಟುಹೋಗಿದ್ದು, ವಾಹನಸವಾರರು ಪರದಾಡುತ್ತಿದ್ದರು. ಇದರಿಂದ ಕಂಗಾಲಾಗಿದ್ದ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಸಾಕಷ್ಟು ಪ್ರತಿಭಟನೆಗಳು ನಡೆದ ಬಳಿಕ ರಸ್ತೆ ರಿಪೇರಿ ಮಾಡಲಾಯಿತಾದರೂ ಅದು ಕೆಲವೇ ಗಂಟೆಗಳಲ್ಲಿ ಮತ್ತೆ ಕೆಟ್ಟು ಹೋಗಿತ್ತು.
ನಮ್ಮ ದೂರುಗಳಿಗೆ ಯಾವುದೇ ರೀತಿಯ ಸ್ಪಂದನೆ ಸಿಗದಿದ್ದರಿಂದ ಬೇಸತ್ತು ನಾನು ಹಾಗೂ ನನ್ನ ತಂದೆ ಈ ರೀತಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ನಿರ್ಧರಿಸಿದೆವು. ನಾವು ಇಲ್ಲಿ ತೆರಿಗೆ ಪಾವತಿಸುತ್ತೇವೆ. ಆದರೆ ಸಾರ್ವಜನಿಕ ಸೌಕರ್ಯಗಳು ಮಾತ್ರ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ನೊಂದು ಈ ಕೆಲಸ ಮಾಡಿರುವುದಾಗಿ ಸುಹಾನಿ ತಿಳಿಸಿದ್ದಾಳೆ.
11ನೇ ತರಗತಿಯ ವಿದ್ಯಾರ್ಥಿನಿ ಮಾಡಿದ ಈ ವೀಡಿಯೋದಲ್ಲಿ, ರಸ್ತೆ ಕೆಟ್ಟು ಹೋದ ಸಂಬಂದ ಗ್ರಾಂಸ್ಥರು ಪ್ರತಿಭಟನೆ ನಡೆಸಿದಾಗ ಅವರಿಗೆ ಬೇದರಿಕೆ ಹಾಕಲಾಗಿತ್ತು ಎಂಬ ಆರೋಪ ಕೂಡ ಮಾಡಿದ್ದಾಳೆ. ಒಟ್ಟಿನಲ್ಲಿ ತಂದೆ ಮತ್ತು ಮಗಳ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿದ್ದಾರೆ.