-ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ದಾನಿಗಳು
ಹುಬ್ಬಳ್ಳಿ/ಧಾರವಾಡ: ರಸ್ತೆ ಬದಿಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಪಂಜಾಬ್ ಮೂಲದ ಮಹಿಳೆಗೆ ಹುಬ್ಬಳ್ಳಿಯ ಜನರು ಸಹಾಯಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಯಲ್ಲಿ ರಸ್ತೆ ಬದಿಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ, ಮರದ ಕೆಳೆಗೆ ಬಾಣಂತಿ ಹಾಗೂ ಮಗುವಿನ ಆರೈಕೆ ಮಾಡುತ್ತಿರುವ ವರದಿಯನ್ನು ಬಿತ್ತರಿಸಿತ್ತು. ಹುಬ್ಬಳ್ಳಿಯ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶ್ರೇಯಾ ಹಿರೇಕೇರೂರ ಅವರು ಪಬ್ಲಿಕ್ ಟಿವಿಯ ವರದಿಗೆ ಸ್ಪಂದಿಸಿ ಮಹಿಳೆಗೆ ಬಟ್ಟೆ ಹಾಗೂ ಮಗುವಿನ ಆರೈಕೆಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದಾರೆ.
ಆರು ತಿಂಗಳ ಹಿಂದೆಯೇ ರಾಜ್ಯಕ್ಕೆ ಗಿಡಮೂಲಿಕೆ ಔಷಧಿ ಆಯುರ್ವೇದ ಔಷಧಿ ಮಾರಾಟಕ್ಕೆ ಬಂದಿದ್ದ ಪಂಜಾಬ್ ಮೂಲದ ಕುಟುಂಬದ ಮಹಿಳೆಗೆ ಇದೀಗ ಟೆಂಟ್‍ನಲ್ಲೆ ಹೆರಿಗೆಯಾಗಿತ್ತು. ವ್ಯಾಪಾರ ಇಲ್ಲದೆ ಪಂಜಾಬ್ ಮೂಲದ ಕುಟುಂಬ ಬಾಣಂತಿಯ ಆರೈಕೆ ಮಾಡಲು ಕಷ್ಟಪಡುತ್ತಿತ್ತು. ಜೊತೆಗೆ ಮರಳಿ ಪಂಜಾಬ್ ತೆರಳಲು ತಮ್ಮ ವಾಹನಗಳಿಗೆ ಯಾರಾದ್ರು ಡಿಸೇಲ್ ವ್ಯವಸ್ಥೆ ಮಾಡಲಿ ಅಂತಾ ಮನವಿ ಮಾಡುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ವರದಿ ಪ್ರಸಾರದ ಬೆನ್ನಲ್ಲೇ ಶ್ರೇಯಾ ಹಿರೇಕೆರೂರು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.