– ಸ್ಪುಟ್ನಿಕ್ V ಲಸಿಕೆ ಅಭಿವೃದ್ಧಿ
– ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ
– ಲಸಿಕೆ ಹಾಕಿಸಿಕೊಂಡ ರಷ್ಯಾ ಅಧ್ಯಕ್ಷರ ಪುತ್ರಿ
ಮಾಸ್ಕೋ: ಕಣ್ಣಿಗೆ ಕಾಣದೇ ಇಡೀ ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ ವೈರಸ್ ಬಾರದಂತೆ ತಡೆಯುವ ಲಸಿಕೆಯನ್ನು ರಷ್ಯಾ ಅಭಿವೃದ್ಧಿ ಪಡಿಸಿದ್ದರೂ ಈಗ ಭಾರೀ ಅನುಮಾನ ಎದ್ದಿದೆ.
ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸಿದ್ದಾರೆ. ಇಂದು ಮಾಸ್ಕೋದಲ್ಲಿ ಸ್ಪುಟ್ನಿಕ್ V ಹೆಸರಿನ ಲಸಿಕೆಯನ್ನು ನೋಂದಣಿ ಮಾಡಿಸಿದ್ದು, ಪುಟಿನ್ ಪುತ್ರಿ ಮರಿಯಾ ಪುಟಿನ್‍ಗೆ ಮೊದಲ ಲಸಿಕೆ ನೀಡಲಾಗಿದೆ. ಉತ್ತಮ ಪರಿಣಾಮ ಬೀರಿದ್ದು, ಸಮೃದ್ಧವಾಗಿ ಆಂಟಿಬಾಡಿಗಳು(ಪ್ರತಿಕಾಯಗಳು) ಉತ್ಪತ್ತಿಯಾಗಿವೆ ಎಂದು ವರದಿಯಾಗಿದೆ.
Advertisement
Advertisement
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕನ್ನು ನಿಯಂತ್ರಣಕ್ಕೆ ಈ ಲಸಿಕೆ ತರುತ್ತದೆ ಎನ್ನಲಾಗಿದೆ. ಇದರ ಮಾಸ್ ಪ್ರೊಡಕ್ಷನ್ ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದ್ದು, ಅಕ್ಟೋಬರ್ ಹೊತ್ತಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈಗಾಗಲೇ 20 ದೇಶಗಳಿಂದ ಒಂದು ಶತಕೋಟಿ ಲಸಿಕೆಗೆ ಬೇಡಿಕೆ ಬಂದಿದೆ ಎಂದು ರಷ್ಯಾ ಹೇಳಿಕೊಂಡಿದೆ.
Advertisement
ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ ಗಮಾಲಿಯಾ ಸಂಶೋಧನಾ ಕೇಂದ್ರ ಮತ್ತು ರಷ್ಯಾ ರಕ್ಷಣಾ ಸಚಿವಾಲಯ ಅಭಿವೃದ್ಧಿ ಪಡಿಸಿರುವ ಈ ಲಸಿಕೆ ಬಗ್ಗೆ ತಜ್ಞರು ಹಲವು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಷ್ಯಾದಲ್ಲಿ ನಡೆಸಿರುವ ಕ್ಲಿನಿಕಲ್ ಟ್ರಯಲ್ಸ್ ಅಷ್ಟೇ ಸಾಕಾಗುವುದಿಲ್ಲ. ಲಸಿಕೆ ರಿಜಿಸ್ಟರ್ ಮಾಡಿಸುವ ಮುನ್ನ ಹಲವು ದೇಶಗಳಲ್ಲಿ ಕ್ಲಿನಿಕಲ್ ಟ್ರಯಲ್ಸ್ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Advertisement
ಅನುಮಾನ ಏನು?
ಪರಿಪೂರ್ಣವಾದ ಕ್ಲಿನಿಕಲ್ ಟ್ರಯಲ್ಸ್ ನಡೆದಿರುವ ಬಗ್ಗೆಯೇ ಅನುಮಾನ ಎದ್ದಿದೆ. ಯಾವುದೇ ಮಾಹಿತಿ ನೀಡದೇ ಕ್ಲಿನಿಕಲ್ ಟ್ರಯಲ್ಸ್ ನಡೆಸಿದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ. ಮಾನವರ ಮೇಲೆ ಕ್ಲಿನಿಕಲ್ ಟ್ರಯಲ್ಸ್ ವೇಳೆ ಅಂತಾರಾಷ್ಟ್ರೀಯ ನಿಯಮಗಳ ಪಾಲನೆ ಆಗಿಲ್ಲ. ಯಾವುದೇ ಪ್ರಯೋಗ ನಡೆಸಿದರೆ ಆದರ ಫಲಿತಾಂಶದ ವರದಿಯನ್ನು ಬಹಿರಂಗ ಪಡಿಸಬೇಕಾಗುತ್ತದೆ. ಆದರೆ ಇಲ್ಲಿ ಕ್ಲಿನಿಕಲ್ ಟ್ರಯಲ್ಸ್ ವೇಳೆ ಕಂಡು ಬಂದ ಅಂಶಗಳನ್ನು ಬಹಿರಂಗಪಡಿಸಿಲ್ಲ. ರಷ್ಯಾ, ಸೌದಿ ಅರೇಬಿಯಾ ಹೊರತುಪಡಿಸಿ ಬೇರೆ ದೇಶಗಳಲ್ಲಿ ಲಸಿಕೆ ಪ್ರಯೋಗ ನಡೆದಿಲ್ಲದ ಕಾರಣ ಲಸಿಕೆಯ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ಸಿಗುತ್ತಾ ರಷ್ಯಾ ಲಸಿಕೆ?
ಸೆಪ್ಟೆಂಬರ್ ತಿಂಗಳಲ್ಲಿ ಕೊರೊನಾ ಲಸಿಕೆ ಉತ್ಪಾದನೆ ಮಾಡಲು ರಷ್ಯಾ ಮುಂದಾಗಿದ್ದು, 2 ಕೋಟಿ ಲಸಿಕೆ ಉತ್ಪಾದನೆಯ ಗುರಿಯನ್ನು ಹಾಕಿದೆ. ಅಕ್ಟೋಬರ್ ತಿಂಗಳಲ್ಲಿ ಸಾರ್ವಜನಿಕರಿಗೆ ನೀಡಲು ಸರ್ಕಾರ ಮುಂದಾಗಿದೆ.
ಭಾರತದಲ್ಲಿ ಸಾರ್ವಜನಿಕ ಬಳಕೆಗೂ ಮುನ್ನ ಕ್ಲಿನಿಕಲ್ ಟ್ರಯಲ್ಸ್ ನಡೆಯಬೇಕು. ಮೂರು ಹಂತಗಳ ಕ್ಲಿನಿಕಲ್ ಟ್ರಯಲ್ಸ್ ಭಾರತದಲ್ಲಿಯೂ ಯಶಸ್ವಿ ಆಗಬೇಕು. ಕ್ಲಿನಿಕಲ್ ಟ್ರಯಲ್ಸ್ ಪೂರ್ಣಗೊಳ್ಳಲು ಕನಿಷ್ಠ 3-4 ತಿಂಗಳು ಬೇಕು. ಕ್ಲಿನಿಕಲ್ ಟ್ರಯಲ್ಸ್ ಮಾಹಿತಿಯನ್ನು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಪರಿಗಣಿಸಬೇಕಾಗುತ್ತದೆ. ಇದು ಆಗುವುದರೊಳಗೆ 2021 ಬಂದಿರುತ್ತದೆ.