– ಎಸ್‍ಐಟಿ ಎದುರು ಯುವತಿ ಮರು ಹೇಳಿಕೆ
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇದೀಗ ಉಲ್ಟಾ ಹೊಡೆದಿದ್ದಾರೆ.
ನೋಟಿಸ್ ನೀಡದೇ ಇದ್ದರೂ ಇದ್ದಕ್ಕಿದ್ದಂತೆ ಯುವತಿ ಇಂದು ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ಮೂಲಕ ಯುವತಿ ತೀವ್ರ ಕುತೂಹಲ ಹುಟ್ಟಿಸಿದರು. ಪ್ರಕರಣದಲ್ಲಿ ನನಗೆ ಅನ್ಯಾಯ ಆಗಿದೆ. ಹೀಗಾಗಿ ಮತ್ತೆ ಹೇಳಿಕೆ ನೀಡಲು ಅವಕಾಶ ಕೊಡುವಂತೆ ಯುವತಿ ಮುಂದಾಗಿದ್ದಾರೆ.
ನನ್ನಿಂದ ಬಲವಂತದ ಹೇಳಿಕೆ ಕೊಡಿಸಿದ್ರು. ಈ ಕೇಸ್ ಈ ಮಟ್ಟಿಗೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ನನ್ನ ಮರ್ಯಾದೆ ಹಾಳಾಗಿದೆ. ಇಷ್ಟರ ಮಟ್ಟಿಗೆ ಹಾಳಾಗುತ್ತೆ ಅಂದುಕೊಂಡಿರಲಿಲ್ಲ. ನಾನು ನಂಬಿದವರೇ ನನಗೆ ಮೋಸ ಮಾಡಿದ್ದಾರೆ ಎಂದು ಹೇಳುವ ಮೂಲಕ ಸಿಡಿ ಕಿಂಗ್ ಪಿನ್ ಗಳ ವಿರುದ್ಧವೇ ಯುವತಿ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ನನಗೆ ಅನ್ಯಾಯ ಆಗಿದೆ. ಹೀಗಾಗಿ ಮರು ಹೇಳಿಕೆಗೆ ಅವಕಾಶ ನೀಡಿ ಎಂದು ಯುವತಿ, ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದಾಳೆ.
ಈ ಹಿನ್ನೆಲೆಯಲ್ಲಿ ಸೆಕ್ಷನ್ 164 ಅಡಿಯಲ್ಲಿ ಯುವತಿ ಮರು ಹೇಳಿಕೆ ಪಡೆಯುವ ಸಾಧ್ಯತೆಗಳಿವೆ. 164ರ ಅಡಿಯಲ್ಲಿ ಮರು ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಯುವತಿ ಮುಂದಾಗಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ನ್ಯಾಯಾಧೀಶರ ಮುಂದೆ ಯುವತಿ ಹಾಜರಾಗಿ ಹೇಳಿಕೆ ದಾಖಲಿಸುವ ಸಾಧ್ಯತೆಗಳು ದಟ್ಟವಾಗಿವೆ.