ನವದೆಹಲಿ: ಇಂದು ಭಾರತಕ್ಕೆ 5 ರಫೇಲ್ ಯುದ್ಧ ವಿಮಾನಗಳು ಲ್ಯಾಂಡ್ ಆಗಲಿದೆ. ಈ ರಫೇಲ್ ವಿಮಾನಗಳು ಭಾರತಕ್ಕೆ ಬರುವಲ್ಲಿ ಜಮ್ಮು ಕಾಶ್ಮೀರ ಮೂಲದ ವಾಯುಸೇನೆಯ ಅಧಿಕಾರಿ ಹಿಲಾಲ್ ಅಹ್ಮದ್ ಪ್ರಮುಖ ಪಾತ್ರವಹಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಫ್ರಾನ್ಸ್‌ನಲ್ಲಿರುವ ಏರ್ ಕಮಾಂಡರ್ ಹಿಲಾಲ್ ಅಹ್ಮದ್ ಭಾರತದ ಬೇಡಿಕೆಗೆ ಅನುಗುಣವಾಗಿ ಡಸಾಲ್ಡ್ ಕಂಪನಿಯ ಜೊತೆ ಸಂವಹನ ನಡೆಸಿ ರಫೇಲ್ ವಿಮಾನವನ್ನು ರೂಪಿಸಿದ್ದಾರೆ.
Advertisement
Advertisement
52 ವರ್ಷದ ಹಿಲಾಲ್ ಅನಂತ್‌ನಾಗ್ ಜಿಲ್ಲೆ ಭಕ್ಷಿಬಾದ್ ನಗರದಲ್ಲಿ ಜನಿಸಿದ್ದು, ಇವರ ತಂದೆ ದಿವಂಗತ ಮೊಹಮ್ಮದ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದಲ್ಲಿ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
Advertisement
1988ರ ಡಿಸೆಂಬರ್ 17 ರಂದು ವಾಯುಸೇನೆಗೆ ಪೈಲಟ್ ಆಗಿ ಸೇರ್ಪಡೆಗೊಂಡ ಇವರು 1993ರಲ್ಲಿ ಫೈಲ್ಡ್ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. 2004ರಲ್ಲಿ ವಿಂಗ್ ಕಮಾಂಡರ್, 2016ರಲ್ಲಿ ಗ್ರೂಪ್ ಕ್ಯಾಪ್ಟನ್, 2016ರಲ್ಲಿ ಏರ್ ಕಮಾಂಡರ್ ಹುದ್ದೆ ಸಿಕ್ಕಿತ್ತು.
Advertisement
ಹಿಲಾಲ್ ಜಮ್ಮು ಜಿಲ್ಲೆಯ ನಾಗ್ರೋಟಾ ಪಟ್ಟಣದ ಸೈನಿಕ್ ಶಾಲೆಯಲ್ಲಿ ಓದಿದ್ದಾರೆ. ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ಪದವಿ ಪಡೆದ ಇವರು ಅಮೆರಿಕದಲ್ಲಿರುವ ಏರ್ ವಾರ್ ಕಾಲೇಜಿನಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪದವಿ ತೇರ್ಗಡೆಯಾಗಿದ್ದರು. ವಾಯು ಸೇನಾ ಮೆಡಲ್ ಮತ್ತು ವಿಶಿಷ್ಟ ಸೇವಾ ಮೆಡಲ್ ಸಹ ಇವರಿಗೆ ಸಿಕ್ಕಿದೆ.
ಮೀರಾಜ್ -2000, ಮಿಗ್ 21, ಕಿರಣ್ ವಿಮಾನವನ್ನು ಅಪಘಾತ ರಹಿತವಾಗಿ ಚಲಾಯಿಸಿದ ಅನುಭವ ಇವರಿಗೆ ಇದೆ. 3 ಸಾವಿರ ಕಿ.ಮೀ ಹಾರಾಟದ ಅನುಭವ ಹೊಂದಿದ್ದ ಕಾರಣ ಹಿಲಾಲ್ ಅಹ್ಮದ್ ಅವರಿಗೆ ರಫೇಲ್ ಉಸ್ತುವಾರಿಯನ್ನು ನೀಡಲಾಗಿತ್ತು.
ಮೊದಲ ಬ್ಯಾಚ್‌ನ 10 ಯುದ್ಧ ವಿಮಾನಗಳ ಪೈಕಿ 5 ಯುದ್ಧ ವಿಮಾನಗಳು ಇಂದು ಭಾರತಕ್ಕೆ ಬರುತ್ತಿದ್ದು ಹರ್ಯಾಣದ ಅಂಬಾಲದಲ್ಲಿರುವ ವಾಯುನೆಲೆಯಲ್ಲಿ ಈ ವಿಮಾನಗಳು ನಿಯೋಜನೆಗೊಳ್ಳಲಿವೆ.
2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್ ವಿಮಾನಗಳನ್ನು(28 ಸಿಂಗಲ್ ಸೀಟರ್, 8 ಡಬಲ್ ಸೀಟರ್) ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್‌ನ ಡಸಾಲ್ಟ್ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್‌ಲೈನ್ ವಿಧಿಸಲಾಗಿತ್ತು. ಈ ಡೆಡ್‌ಲೈನ್‌ಗೆ ಅನುಗುಣವಾಗಿ ಮೊದಲ ಬ್ಯಾಚ್‌ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್‌ನಲ್ಲಿ ತರಬೇತಿ ನೀಡಲು ಬಳಕೆಯಾಗಲಿದೆ. ಎಲ್ಲ ವಿಮಾನಗಳು 2021ರ ಡಿಸೆಂಬರ್ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ.
ರಫೇಲ್ ವಿಶೇಷತೆ ಏನು?
ರಫೇಲ್ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.
ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮೀ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.
ಭಾರತದ ಬೇಡಿಕೆ ಏನಿತ್ತು?
ಯಾವ ದೇಶ ಏನು ಬೇಡಿಕೆ ಇಡುತ್ತದೋ ಆ ಬೇಡಿಕೆಗೆ ಅನುಗುಣವಾಗಿ ಡಸಾಲ್ಟ್ ಕಂಪನಿ ರಫೇಲ್ ವಿಮಾನವನ್ನು ಅಭಿವೃದ್ಧಿ ಪಡಿಸುತ್ತದೆ. ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ, ರೆಡಾರ್ ವಾರ್ನಿಂಗ್ ಇನ್ಫ್ರಾರೆಡ್ ಶೋಧ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು ಅಳವಡಿಸಬೇಕೆಂದು ಭಾರತ ಬೇಡಿಕೆ ಇಟ್ಟಿತ್ತು.